
ಹೈದರಾಬಾದ್: ಹೈದರಾಬಾದ್ ನ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಗುಂಪು ಘರ್ಷಣೆಯಾಗಿದ್ದು, ಘರ್ಷಣೆಯಲ್ಲಿ 15 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಹೈದರಾಬಾದ್ ನ ಹಯತ್ನಗರದಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುಂಪು ಘರ್ಷಣೆಯಾಗಿದ್ದು, ಘರ್ಷಣೆಗೆ ವಾದವಿವಾದಗಳೇ ಕಾರಣ ಎಂದು ತಿಳಿದುಬಂದಿದೆ. 2ನೇ ವರ್ಷದ ಎಂಜಿನಿಯರಿಂಗ್ ತೆಲುಗು ವಿದ್ಯಾರ್ಥಿಗಳು ಹಾಗೂ ಬಿಹಾರ ಮೂಲದ ವಿದ್ಯಾರ್ಥಿಗಳ ನಡುವೆ ಕೆಲವು ದಿನಗಳಿಂದ ಮಾತುಕತೆ ನಡೆದಿದೆ. ನಿನ್ನೆ ಸಹ ತೆಲುಗು ವಿದ್ಯಾರ್ಥಿಗಳು ಬಿಹಾರ ವಿದ್ಯಾರ್ಥಿಗಳ ಕುರಿತಂತೆ ಕೆಲವು ಮಾತುಗಳನ್ನಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಬಿಹಾರ ವಿದ್ಯಾರ್ಥಿಗಳು ತೆಲುಗು ವಿದ್ಯಾರ್ಥಿಗಳೊಂದಿಗೆ ಘರ್ಷಣೆಗಳಿದಿದ್ದಾರೆ.
ಘರ್ಷಣೆ ವೇಳೆ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಹೊಡೆದಾಡಿದ ಪರಿಣಾಮ 15 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಹಯತ್ನಗರದ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿ.ವೆಂಕಟೇಶ್ವರಲು ಹೇಳಿದ್ದಾರೆ.
ಗಾಯಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘರ್ಷಣೆ ಕುರಿತಂತೆ ಎರಡೂ ಗುಂಪುಗಳು ಪ್ರಕರಣ ದಾಖಲಿಸಿದೆ. ಪ್ರಕರಣ ಸಂಬಂಧ ಎರಡು ಗುಂಪುಗಳು ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
Advertisement