

ಜಮ್ಮು: ಪಾಕಿಸ್ತಾನ ಸೈನಿಕರು ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಶನಿವಾರ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ನಾಗರೀಕರು ಗಾಯಗೊಂಡಿರುವ ಘಟನೆ ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಡೆದಿದೆ.
ಕಳೆದೆರಡು ದಿನಗಳಿಂದಲೂ ಪಾಕಿಸ್ತಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಇಂದು ಬೆಳಿಗ್ಗೆಯಿಂದಲೂ ಪೂಂಚ್ ನ ಗಡಿ ನಿಯಂತ್ರಣ ರೇಖೆ ಬಳಿ ಗುಂಡಿನ ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಸೈನಿಕರ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಸ್ಥಳೀಯ ನಾಗರೀಕರಿಬ್ಬರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಪಾಕಿಸ್ತಾನದ ಸೈನಿಕರು ಜುಲೈ ತಿಂಗಳವರೆಗೆ 192 ಬಾರಿ ಕದನ ವಿರಾಮ ಉಲ್ಲಂಘಿಸಿದ್ದರು. ಅಪ್ರಚೋದಿತ ಗುಂಡಿನ ದಾಳಿಗೆ 3 ಯೋಧರು ಸಾವನ್ನಪ್ಪಿದ್ದರಲ್ಲದೇ, 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.