ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಹಾಗೂ ಗಾಯಕ ಸೋನು ನಿಗಮ್
ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಹಾಗೂ ಗಾಯಕ ಸೋನು ನಿಗಮ್

ರಾಧೆ ಮಾಳನ್ನು ಕಾಳಿಗೆ ಹೋಲಿಸಿ ವಿವಾದಕ್ಕೀಡಾದ ಸೋನು ನಿಗಮ್

ಇತ್ತೀಚಗಷ್ಟೇ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಗಳಿಂದಲೇ ಸುದ್ದಿಗೆ ಬರುತ್ತಿರುವ ಸ್ವಯಂಘೋಷಿತ ದೇವ ಮಹಿಳೆ ರಾಧೆ ಮಾಳಿಗೆ ಇದೀಗ ಬಾಲಿವುಡ್ ನ ಖ್ಯಾತ ಗಾಯಕ ಸೋನು ನಿಗಮ್ ಬೆಂಬಲಕ್ಕೆ ನಿಂತಿತ್ತು. ಅವರ ತುಂಡುಡುಗೆ...

ಮುಂಬೈ: ಇತ್ತೀಚೆಗಷ್ಟೇ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಗಳಿಂದಲೇ ಸುದ್ದಿಗೆ ಬರುತ್ತಿರುವ ಸ್ವಯಂಘೋಷಿತ ದೇವ ಮಹಿಳೆ ರಾಧೆ ಮಾಳಿಗೆ ಇದೀಗ ಬಾಲಿವುಡ್ ನ ಖ್ಯಾತ ಗಾಯಕ ಸೋನು ನಿಗಮ್ ಬೆಂಬಲಕ್ಕೆ ನಿಂತಿತ್ತು. ಅವರ ತುಂಡುಡುಗೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ಸುಭಾಷ್ ಗಾಯ್ ಹಾಗೂ ಸಂಸದ ಮನೋಜ್‌ ತಿವಾರಿ ಬಳಿಕ ಇದೀಗ ರಾಧೆ ಮಾ ಬೆಂಬಲಕ್ಕೆ ಸೋನು ನಿಗಮ್ ನಿಂತಿದ್ದು, ಸೋನು ರಾಧೆ ಮಾ ಅವರ ತುಂಡುಗೆಯನ್ನು ಬೆಂಬಲಿಸಿದ್ದಾರೆ. ರಾಧೆ ಪರವಾಗಿ ಸರಣಿಯಾಗಿ ಟ್ವೀಟ್ ಮಾಡಿರುವ ಸೋನು, ಸಾಧುಗಳು ಬಟ್ಟೆಯಿಲ್ಲದೆ, ರಸ್ತೆಯಲ್ಲಿ ಮುಜುಗರ ಉಂಟು ಮಾಡುವಂತೆ ಕುಣಿಯುತ್ತಿರುತ್ತಾರೆ. ಆದರೆ, ಇದನ್ನು ಪ್ರಶ್ನಿಸುವವರು ಯಾರೂ ಇರುವುದಿಲ್ಲ. ಒಂದು ವೇಳೆ ದೂರು ದಾಖಲಾಗಿ ಬಂಧನಕ್ಕೊಳಗಾದರೂ ಕೆಲವು ದಿನಗಳ ಬಳಿಕ ಬಿಡುಗಡೆಯಾಗಿ ಹೊರ ಬರುತ್ತಾರೆ. ನಮ್ಮ ದೇಶದಲ್ಲಿ ಬಹಳ ಲಿಂಗ ತಾರತಮ್ಯ ಇದೆ ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ರಾಧೆ ಮಾ ಅವರನ್ನು ದೇವಿ ಕಾಳಿ ಮಾತೆಗೆ ಹೋಲಿಕೆ ಮಾಡಿರುವ ಅವರು, ರಾಧೆ ಮಾ ಅವರ ತುಂಡುಗೆಯ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ದೇವಿ ಕಾಳಿ ಮಾ ಅವರ ಚಿತ್ರವನ್ನು ಕಡಿಮೆ ಬಟ್ಟೆಯಲ್ಲಿ ಚಿತ್ರಿಸುತ್ತಾರೆ ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ವಿಚಿತ್ರವೆಂದರೆ ನಮ್ಮ ದೇಶದಲ್ಲಿ ತುಂಡುಡುಗೆ ಧರಿಸುವ ಮಹಿಳೆ ವಿರುದ್ಧವೇ ಮೊಕದ್ದಮೆ ಹೂಡಲಾಗುತ್ತದೆ.

ಪ್ರತಿಯೊಬ್ಬರೂ ದೇವರನ್ನು ಒಂದೊಂದು ಮೂರ್ತಿಯ ಮೂಲಕ ನೋಡಲು ಇಚ್ಛಿಸುತ್ತಾರೆ. ಕೆಲವರು ಸಾಯಿಬಾಬಾ ಮೂರ್ತಿಯ ಮೂಲಕ ದೇವರನ್ನು ಕಂಡರೆ, ಮತ್ತೆ ಕೆಲವರು ಶಿವನ ಮೂರ್ತಿಯಿಂದ ನೋಡುತ್ತಾರೆ. ಮತ್ತೆ ಕೆಲವರು ಹಾಡು ಹಾಗೂ ನೃತ್ಯದ ಮೂಲಕ ದೇವರನ್ನು ಕಾಣಲಿಚ್ಛಿಸುತ್ತಾರೆ. ಹಾಗೆಯೇ ರಾಧೆ ಮಾ ಅವರ ಭಕ್ತರೂ ಸಹ ಹಾಡು, ನೃತ್ಯದ ಮೂಲಕ ರಾಧೆ ಮಾ ಅವರನ್ನು ನೋಡಲು ಇಚ್ಛಿಸುತ್ತಾರೆ. ರಾಧೆ ಮಾ ಬಟ್ಟೆ ಬಗ್ಗೆ ಅವರ ಅನುಯಾಯಿಗಳಿಗೆ, ಭಕ್ತರಿಗೆ ಯಾವುದೇ ತೊಂದರೆಯಿಲ್ಲ ಎಂದಾದರೆ ಈ ಬಗ್ಗೆ ಇತರರೇಕೆ ಚಿಂತೆ ಮಾಡಬೇಕು. ನಮ್ಮ ದೇಶದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಬೇರೆ ಬೇರೆ ನಿಯಮಗಳಿವೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.

ಸೋನುನಿಗಮ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಾದ್ಯಂತ ಹಲವು ವಿರೋಧ ವ್ಯಕ್ತವಾಗುತ್ತಿದ್ದು, ಕಾಳಿ ಮಾತೆಗೆ ರಾಧೆ ಮಾ ಅವರನ್ನು ಹೋಲಿಕೆ ಮಾಡಿರುವುದು ಇದೀಗ  ವಿವಾದವೊಂದಕ್ಕೆ ಕಾರಣವಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com