
ವಿಶ್ವಸಂಸ್ಥೆ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ನಿರಂತರ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ, ಸಂಯಮ ಕಾಯ್ದುಕೊಳ್ಳುವಂತೆ ಉಭಯ ದೇಶಗಳಿಗೆ ಸಲಹೆ ನೀಡಿದೆ.
ಭಾರತ-ಪಾಕ್ ಗಡಿಯಲ್ಲಿನ ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕಿಸುತ್ತಿರುವ ವಿಶ್ವಸಂಸ್ಥೆ ಗಡಿಯಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಉಭಯ ದೇಶಗಳಿಗೆ ಸಲಹೆ ನೀಡಿದೆ. ಇದೇ ವೇಳೆ ಉಭಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯನ್ನು ಸ್ವಾಗತಿಸಿರುವ ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ಅವರು, ಗಡಿಯಲ್ಲಿ ಶಾಂತಿ ಸ್ಥಾಪನೆಗಾಗಿ ಉಭಯ ದೇಶಗಳ ಸೈನಿಕರು ಸಂಯಮ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದಾರೆ.
ಸತತ ಮೂರು ದಿನಗಳಿಂದ ಭಾರತ-ಪಾಕ್ ಗಡಿಯಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಈ ವರೆಗೂ ಓರ್ವ ನಾಗರಿಕ ಸೇರಿದಂತೆ ಸುಮಾರು 6 ಮಂದಿ ಮೃತಪಟ್ಟಿದ್ದಾರೆ. ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಸೇನೆ ಗಡಿಯಲ್ಲಿ ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದು, ಜಮ್ಮು ಕಾಶ್ಮೀರದ ಆರ್ ಎಸ್ ಪುರ ಸೆಕ್ಟರ್ ಬಳಿ ಪಾಕ್ ಸೇನೆಯ ಗುಂಡಿನ ದಾಳಿಗೆ ಓರ್ವ ನಾಗರಿಕನಿಗೆ ಗಾಯವಾಗಿತ್ತು. ಇದಲ್ಲದೆ ಜಮ್ಮುವಿನ ಪೂಂಚ್ ಜಿಲ್ಲೆಯ ಸೌಜಿಯಾನ ಮತ್ತು ಮಂಡಿ ಸೆಕ್ಟರ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘಿಸಿತ್ತು, ಕಳೆದ ಭಾನುವಾರ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 1 ಘಟನೆಯವರೆಗೂ ಗುಂಡಿನ ದಾಳಿ ನಡೆಸಿತ್ತು.
ಹೀಗಾಗಿ ಪಾಕಿಸ್ತಾನದ ನಿರಂತರ ಕದನ ವಿರಾಮ ಉಲ್ಲಂಘನೆ ಕುರಿತಂತೆ ಭಾರತ ವಿಶ್ವಸಂಸ್ಥೆಗೆ ಮಂಗಳವಾರ ವರದಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಬಾನ್ ಕಿಮೂನ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
Advertisement