
ನವದೆಹಲಿ: ಇಬ್ಬರು ಕಾಶ್ಮೀರಿ ಪ್ರತ್ಯೇಕವಾದಿಗಳ ಹಠಾತ್ ಬಂಧನ ಮತ್ತು ಬಿಡುಗಡೆ ನಾಡಿದ್ದು ಭಾನುವಾರ ನಿಗದಿಯಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಗೆ ಹಿನ್ನೆಡೆ ಉಂಟಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಯಾರು ಮೊದಲು ಮಾತುಕತೆಯಿಂದ ಹಿಂದಕ್ಕೆ ಸರಿಯುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.
ಹುರ್ರಿಯತ್ ನಾಯಕರಾದ ಸಯ್ಯದ್ ಆಲಿ ಶಾಹ್ ಗಿಲಾನಿ ಮತ್ತು ಇನ್ನಿಬ್ಬರು ನಾಯಕರನ್ನು ಪಾಕಿಸ್ತಾನ ಹೈ ಕಮಿಷನ್ ನಾಡಿದ್ದಿನ ಸಭೆಗೆ ಆಹ್ವಾನಿಸಿದ್ದು, ಭಾರತವನ್ನು ಕಂಗೆಡಿಸಿದೆ. ಆದರೆ ಇದು ಸಾಮಾನ್ಯ ಭೇಟಿ ಮತ್ತು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಎಂದು ಪಾಕಿಸ್ತಾನ ಹೇಳಿದೆ.
ಇಂದು ಹುರ್ರಿಯತ್ ನಾಯಕರ ಹಠಾತ್ ಬಂಧನ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಗೆ ಹೊಸ ಅಂಶವನ್ನು ತಂದಿದ್ದು, ಇದಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ.
ಪ್ರತ್ಯೇಕತಾವಾದಿ ಮುಖಂಡರ ಬಂಧನದ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಣ ಭಯೋತ್ಪಾದನೆ ವಿಷಯಕ್ಕೆ ಸಂಬಂಧಪಟ್ಟ ಮಾತುಕತೆಯಲ್ಲಿ ಇಬ್ಬರನ್ನು ಬಿಟ್ಟರೆ ಮೂರನೆಯವರ ಪ್ರವೇಶ ಬೇಡ ಎಂಬ ಸಂದೇಶವನ್ನು ಭಾರತ, ಪಾಕಿಸ್ತಾನಕ್ಕೆ ಕೊಟ್ಟಂತಿದೆ. ನಾಡಿದ್ದು ಸಭೆಯಲ್ಲಿ ಅವರು ಪಾಕಿಸ್ತಾನದ ಭದ್ರತಾ ಸಲಹೆಗಾರ ಸರ್ತಜ್ ಅಜೀಜ್ ಅವರನ್ನು ಭೇಟಿ ಮಾಡಿದರೆ ಮತ್ತೆ ಬಂಧನಕ್ಕೊಳಗಾಗಬೇಕಾದೀತು ಎಂಬ ಸೂಚನೆ ಕೂಡ ಇದರಲ್ಲಿದೆ. ಒಟ್ಟಾರೆಯಾಗಿ ಹುರ್ರಿಯತ್ ಮುಖಂಡರ ಇಂದಿನ ಬಂಧನ-ಬಿಡುಗಡೆ ಪ್ರಕರಣ ಭಾರತ-ಪಾಕ್ ನಡುವಣ ಮಾತುಕತೆಗೆ ಹೊಸ ತಿರುವು ನೀಡಲಿದೆ.
ಪಾಕಿಸ್ತಾನ ಹೈ ಕಮಿಷನರ್ ಕಾಶ್ಮೀರಿ ಪ್ರತ್ಯೇಕತಾವಾದಿ ಮುಖಂಡರ ಸಲಹೆ ಕೇಳಿದ್ದರಿಂದ ಕಳೆದ ವರ್ಷ ಭಾರತ-ಪಾಕಿಸ್ತಾನದ ವಿದೇಶಾಂಗ ಮಟ್ಟದ ಮಾತುಕತೆ ಮುರಿದುಬಿದ್ದಿತ್ತು.
Advertisement