ಚೆನ್ನೈ ಪ್ರವಾಹ: ಹಾಲು ಲೀಟರ್ ಗೆ 100, ತರಕಾರಿ ಕೆ.ಜಿಗೆ 90 ರೂಪಾಯಿ

ಮಳೆಯ ತೀವ್ರತೆ ಚೆನ್ನೈ ನಗರದಲ್ಲಿ ಕೊಂಚ ಕಡಿಮೆಯಾಗಿದ್ದರೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಲು ಮತ್ತು ನೀರಿನ ಪೂರೈಕೆಗೆ...
ಚೆನ್ನೈ ನಗರದ ರಸ್ತೆಯೊಂದು ನೀರಿನಿಂದ ತುಂಬಿರುವ ದೃಶ್ಯ.
ಚೆನ್ನೈ ನಗರದ ರಸ್ತೆಯೊಂದು ನೀರಿನಿಂದ ತುಂಬಿರುವ ದೃಶ್ಯ.

ಚೆನ್ನೈ: ಮಳೆಯ ತೀವ್ರತೆ ಚೆನ್ನೈ ನಗರದಲ್ಲಿ ಕೊಂಚ ಕಡಿಮೆಯಾಗಿದ್ದರೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಲು ಮತ್ತು ನೀರಿನ ಪೂರೈಕೆಗೆ ವ್ಯತ್ಯಯವುಂಟಾಗಿದ್ದು, ಕೆಲವು ಕಡೆಗಳಲ್ಲಿ ಅತಿಯಾದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಮಳೆಯಿಂದಾಗಿ ಸತತ ಮೂರನೇ ದಿನವಾದ ಇಂದು ಕೂಡ ವಿದ್ಯುತ್, ಸಾರಿಗೆ ಮತ್ತು ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯವುಂಟಾಗಿದೆ. ಚೆನ್ನೈ ನಗರದ ಹಲವು ಕಡೆಗಳಲ್ಲಿ ಹಾಲಿನ ಬೆಲೆ 100 ರೂಪಾಯಿ, ತರಕಾರಿ ಬೆಲೆ 80ರಿಂದ 90ಕ್ಕೆ ಏರಿದೆ. ಚೆನ್ನೈಯ ಕೋಯಂಬೆಡು ತರಕಾರಿ ಮಾರುಕಟ್ಟೆ ನಗರದ ನಿವಾಸಿಗಳಿಂದ ಜಲ ಪ್ರವಾಹದಿಂದಾಗಿ ಸಂಪರ್ಕ ಕಳೆದುಕೊಂಡಿದೆ. ಹಾಲು ಮಾರಾಟದ ಅಂಗಡಿಗಳ ಮುಂದೆ ಜನ ಸರದಿಯಲ್ಲಿ ನಿಂತಿಕೊಂಡಿರುವುದು ಸಾಮಾನ್ಯವಾಗಿದೆ. ಇದುವರೆಗೆ 30 ರೂಪಾಯಿಗೆ ಸಿಗುತ್ತಿದ್ದ 20 ಲೀಟರ್ ಬಾಟಲ್ ನೀರಿನ ಬೆಲೆ 150 ರೂಪಾಯಿಗೆ ಏರಿದೆ. ನಗರದ ಬಹುತೇಕ  ಸೂಪರ್ ಮಾರ್ಕೆಟ್ ಗಳು, ಹೊಟೇಲ್ ಗಳು ಮುಚ್ಚಿವೆ. ಇನ್ನು ಹಲವು ಕಡೆಗಳಲ್ಲಿ ಶೇಖರಣೆ ಮುಗಿದಿದೆ.

ಈಶಾನ್ಯ ಮುಂಗಾರು ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚೆನ್ನೈಯಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ತಮಿಳುನಾಡಿನ ಹಲವು ಜಿಲ್ಲೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅದರಲ್ಲೂ ಚೆನ್ನೈ ಮತ್ತು ಅದರ ಉಪನಗರಗಳು ಪ್ರವಾಹಕ್ಕೆ ಸಿಲುಕಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com