
ಚೆನ್ನೈ: ತಮಿಳುನಾಡಿನಲ್ಲಿ ಉಂಟಾದ ಪ್ರವಾಹ ಮತ್ತು ಆ ನಂತರದ ಆಸ್ತಿಪಾಸ್ತಿ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಮುಖ್ಯಮಂತ್ರಿ ಜೆ.ಜಯಲಲಿತಾ ಪ್ರಧಾನ ಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಕಳೆದ ಕೆಲ ವಾರಗಳಲ್ಲಿ ತಮಿಳುನಾಡು ರಾಜ್ಯದಲ್ಲಿ ಸುರಿದಿರುವ ಸತತ ಮಳೆಯಿಂದ ಯಾವ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ನೀವೇ ಸ್ವತಃ ಕಂಡಿದ್ದೀರಿ. ಈ ವಿಪತ್ತಿನಿಂದಾಗಿ ಮೂಲಭೂತ ಸೌಕರ್ಯಗಳಿಗೆ ಭಾರೀ ಹಾನಿಯುಂಟಾಗಿದೆ.ಸಾವಿರಾರು ಜನರ ಆಸ್ತಿಪಾಸ್ತಿ ನೀರಿನಲ್ಲಿ ಮುಳುಗಿ ಹೋಗಿದೆ. ಅಲ್ಲಿನ ಜನರಿಗೆ ಪುನರ್ವಸತಿ ಕಾರ್ಯ ಕಲ್ಪಿಸಲು ಮತ್ತು ಪರಿಹಾರ ಕಾರ್ಯಗಳಿಗಾಗಿ ಸಾಕಷ್ಟು ಹಣ ಬೇಕಾಗಿದೆ ಎಂದು ಪ್ರಧಾನ ಮಂತ್ರಿಗೆ ಬರೆದ ವಿವರವಾದ ಪತ್ರದಲ್ಲಿ ಜಯಲಲಿತಾ ವಿವರಿಸಿದ್ದಾರೆ.
ಅನೇಕ ಮಂದಿ ತಮ್ಮ ಮನೆ-ಮಠಗಳನ್ನು, ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಮಧ್ಯಮ ಮತ್ತು ಕೆಳ ಮಧ್ಯಮ ಮತ್ತು ಬಡ ವರ್ಗಗಳಿಂದ ಬಂದವರಾಗಿದ್ದಾರೆ. ಅಂತವರಿಗೆ ಸೂಕ್ತ ಪರಿಹಾರ ಒದಗಿಸಿದರೆ ಮಾತ್ರ ತಮ್ಮ ಜೀವನವನ್ನು ಪುನರ್ ರೂಪಿಸಲು ಸಾಧ್ಯ. ಜನ ಧನ ಯೋಜನೆಯಡಿ ಖಾತೆಗಳನ್ನು ಹೊಂದಿರುವವರಿಗೆ ಸಾಲ ನೀಡಲು ರಾಜ್ಯ ಸರ್ಕಾರ ಚಿಂತಿಸಲಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಕೈಗೆಟಕುವ ದರದಲ್ಲಿ ಅಗತ್ಯ ವಸ್ತುಗಳು ಜನರಿಗೆ ಸಿಗುವಂತಾಗಲು ನೆರೆ ಪೀಡಿತ ಜಿಲ್ಲೆಗಳಲ್ಲಿ ಸುಂಕ ರಹಿತ ದರದಲ್ಲಿ ವಸ್ತುಗಳನ್ನು ಮುಂದಿನ ವರ್ಷ ಮಾರ್ಚ್ ವರೆಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಯಲಲಿತಾ ವಿವರಿಸಿದ್ದಾರೆ.
Advertisement