ಉ.ಪ್ರ.ಕ್ಕೆ ಲೋಕಾಯುಕ್ತ ನೇಮಕ ಮಾಡಿದ ಸುಪ್ರೀಂ

ಅಪರೂಪದ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್ ಬುಧವಾರ ತನ್ನ ಸಾಂವಿಧಾನಿಕ ಅಧಿಕಾರ ಬಳಸಿ ಉತ್ತರಪ್ರದೇಶ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಅಪರೂಪದ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್ ಬುಧವಾರ ತನ್ನ ಸಾಂವಿಧಾನಿಕ ಅಧಿಕಾರ ಬಳಸಿ ಉತ್ತರಪ್ರದೇಶ ಲೋಕಾಯುಕ್ತರನ್ನಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾ. ವೀರೇಂದ್ರ ಸಿಂಗ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸುವ ಮೂಲಕ ಅಲ್ಲಿನ ರಾಜ್ಯ ಸರ್ಕಾರಕ್ಕೆ ತಪರಾಕಿ ನೀಡಿದೆ. 
ಲೋಕಾಯುಕ್ತ ನೇಮಕಕ್ಕೆ ಸಂಬಂಧಪಟ್ಟಂತೆ ಮೇಲಿಂದ ಮೇಲೆ ತಾನು ನೀಡಿದ ಆದೇಶವನ್ನು ಪಾಲಿಸದ ಎಸ್ಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾ. ರಂಜನ್ ಗೊಗೋಯ್ ನೇತೃತ್ವದ ಪೀಠ, ಅರ್ಹ ನ್ಯಾಯಾಧೀಶರ ಪಟ್ಟಿಯನ್ನು ಪರಿಶೀಲಿಸಿ ನೇರವಾಗಿ ಹೊಸ ನೇಮಕ ಮಾಡಿ ಆದೇಶ ಹೊರಡಿಸಿದೆ. 
ಈ ನೆಲದ ಅತ್ಯುನ್ನತ ನ್ಯಾಯಾಲಯದ ಆದೇಶವನ್ನು ಪಾಲಿಸದೇ ನಿರ್ಲಕ್ಷಿಸಿದ ರಾಜ್ಯ ಸರ್ಕಾರದ ಧೋರಣೆ ದುರದೃಷ್ಟಕರ ಎಂದು ಖಾರವಾಗಿ ಪ್ರತಿಕ್ರಿಯಿಸಿರುವ ಪೀಠ, ಅಲ್ಲಿನ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರು, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. 
ಇದಕ್ಕೂ ಮುನ್ನ ಪ್ರಕರಣದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಪೀಠದ ಮುಂದೆ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ರಾಜ್ಯ ಸರ್ಕಾರ ಐವರು ನ್ಯಾಯಾಧೀಶರ ಹೆಸರುಗಳನ್ನು ಅಂತಿಮಗೊಳಿಸಿದೆ. ಆದರೆ, ಅಂತಿಮ ಆಯ್ಕೆಯ ಕುರಿತು ಒಮ್ಮತಕ್ಕೆ ಬರುವುದು ಸಾಧ್ಯವಾಗಿಲ್ಲ ಎಂದು ಸಮಜಾಯಿಷಿ ನೀಡಿದರು. 
ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪೀಠ, ಐವರ ಪಟ್ಟಿ ಕೊಡಿ, ಮುಂದೇನು ಮಾಡಬೇಕು ಹಾಗೂ ತನ್ನ ಆದೇಶವನ್ನು ಹೇಗೆ ಜಾರಿಗೆ ತರಬೇಕೆಂಬುದು ನಮಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿತ್ತು. 2 ದಿನಗಳ ಹಿಂದೆ ಲೋಕಾಯುಕ್ತ ನೇಮಕ ಕುರಿತ ತನ್ನ ಆದೇಶ ಪಾಲಿಸದ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದ ಸುಪ್ರೀಂ, ನೇಮಕಾಧಿಕಾರ ಹೊಂದಿರುವವರು ತಮ್ಮದೇ ಆದ ಹಿತಾಸಕ್ತಿ ಹೊಂದಿರುವಂತಿದೆ ಎಂದು ನೇರವಾಗಿ ಪ್ರಹಾರ ನಡೆಸಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com