ಪಾಟ್ನಾ: ಅಮೃತಸರಕ್ಕೆ ಸಾಗುತ್ತಿದ್ದ ಅಮ್ರಪಾಲಿ ಎಕ್ಸ್ಪ್ರೆಸ್ ರೈಲು ಬಿಹಾರದಲ್ಲಿ ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಯಾಣಿಕರು ಘಟನೆಯಲ್ಲಿ ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕತಿಹಾರ್ನಿಂದ ಅಮೃತಸರಕ್ಕೆ ಸಾಗುತ್ತಿದ್ದ ರೈಲು ಸಂಖ್ಯೆ 15707 ಅಮ್ರಪಾಲಿ ಎಕ್ಸ್ಪ್ರೆಸ್ ರೈಲಿನ ಒಟ್ಟು ಏಳು ಬೋಗಿಗಳು ಹಳಿ ತಪ್ಪಿದ್ದು, ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕತಿಹಾರ್ ಎಕ್ಸ್ ಪ್ರೆಸ್ ರೈಲು ಬಿಹಾರದ ಖಗಾರಿಯಾ ಬಳಿ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆ ವಕ್ತಾರ ಅನಿಲ್ ಸಕ್ಸೇನಾ ತಿಳಿಸಿದ್ದಾರೆ.
ಮುಂಜಾನೆ ಎಲ್ಲರೂ ನಿದ್ದೆಗೆ ಜಾರಿದ್ಧ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹಳಿ ತಪ್ಪಿದ ಬೋಗಿಗಳ ಪೈಕಿ ಐದು ಸ್ಲೀಪರ್ ಕೋಚ್, ಎರಡು ಎಸಿ ಕೋಚ್ಗಳಾಗಿವೆ ಎಂದು ತಿಳಿದು ಬಂದಿದೆ. ಬೆಳಗ್ಗೆ ಕೆಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿತ್ತು. ಎಲ್ಲಾ ಬೋಗಿಗಳನ್ನು ಹಳಿಯಿಂದ ತೆರವುಗೊಳಿಸಿ ಉಳಿದ ರೈಲುಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಕ್ಸೇನಾ ತಿಳಿಸಿದ್ದಾರೆ.
Advertisement