

ನವದೆಹಲಿ: ರಾಜಕೀಯ ದ್ವೇಷಕ್ಕಾಗಿ ತಮ್ಮ ನಾಯಕರ ವಿರುದ್ಧ ನ್ಯಾಷನಲ್ ಹೆರಾಲ್ಡ್ ಪ್ರಕರಣದ ದಾಖಲಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ದೆಹಲಿ ಸೇರಿದಂತೆ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಸಿ ತಮ್ಮ ನಾಯಕರ ಪರ ಬಲಪ್ರದರ್ಶನ ನಡೆಸಿದರು.
ದೆಹಲಿ ನಗರವಂತೂ ಕಾಂಗ್ರೆಸ್ ಶಕ್ತಿ ಪ್ರದರ್ಶನದ ಅಖಾಡವಾಗಿ ಬದಲಾಗಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧದ ಪ್ರಕರಣ ರಾಜಕೀಯ ತಿರುವು ಪಡೆದ ಹಿನ್ನೆಲೆಯಲ್ಲಿ ತಮ್ಮ ನಾಯಕರಿಗೆ ಬೆಂಬಲ ವ್ಯಕ್ತಪಡಿಸಲು ರಾಜಧಾನಿಯಷ್ಟೇ ಅಲ್ಲದೆ, ನಾಯಕರ ಸ್ವಕ್ಷೇತ್ರ, ಉತ್ತರ ಪ್ರದೇಶದ ರಾಯï ಬರೇಲಿಯಿಂದಲೂ ಆಗಮಿಸಿದ್ದ ಸಾವಿ-ರಾರು ಕಾರ್ಯಕರ್ತರು ಭಾರೀ ಸಂಖ್ಯೆ-ಯಲ್ಲಿ ಬಲಪ್ರದರ್ಶನ ಮಾಡಿದರು.
ಸೋನಿಯಾ, ರಾಹುಲ್ ಪರ ಹಾಗೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಮೊಳಗಿಸಿದ ಕಾರ್ಯಕರ್ತರು, ಕೋರ್ಟ್ ತಮ್ಮ ನಾಯಕರಿಗೆ ಜಾಮೀನು ಮಂಜೂರು ಮಾಡುತ್ತಿದ್ದಂತೆ ಹರ್ಷೋದ್ಗಾರ ಮೊಳಗಿಸಿದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಆವರಣ ಹಾಗೂ ಅಕ್ಬರ್ ರಸ್ತೆಯ ಕಾಂಗ್ರೆಸ್ ಕಚೇರಿ ವ್ಯಾಪ್ತಿಯಲ್ಲಿ ಭಾರೀ ಬಂದೋಬಸ್ತ್ ಹಾಕಲಾಗಿತ್ತು.
ಮುಂಬೈ, ಜೈಪುರ, ಲಖನೌ, ಕಾನ್ಪುರ, ವಾರಣಾಸಿ, ಪಟನಾ, ನಾಗ್ಪುರ ಹಾಗೂ ಕೊಯಮತ್ತೂರಿನಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದರು. ಭೋಪಾಲ್ ನಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ, ರಸ್ತೆ ತಡೆಗೆ ಯತ್ನಿಸಿದ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಇದೇ ವೇಳೆ, ಭುವನೇಶ್ವರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೈಗಳನ್ನು ಚುಚ್ಚಿ ರಕ್ತದಲ್ಲಿ ಹೆಬ್ಬೆಟ್ಟು ಒತ್ತಿದರು. ಟ್ವಿಟರ್‍ನಲ್ಲಿ ಕಾಂಗ್ರೆಸ್ ಸಮರ್ಥನೆ: ಐಎನ್‍ಸಿ ಇಂಡಿಯಾ ಹ್ಯಾಂಡಲ್ ಮೂಲಕ ಕಾಂಗ್ರೆಸ್ ಸುಮಾರು 30ಕ್ಕೂ ಹೆಚ್ಚು ಟ್ವೀಟ್ ಗಳ ಮೂಲಕ ಶನಿವಾರ ಹೆರಾಲ್ಡ್ ಕೇಸಿಗೆ ಸಂಬಂಧಿಸಿ ಸಮರ್ಥನೆ ನೀಡಿತು. ಜವಾಹರ್‍ಲಾಲ್ ನೆಹರೂ ಅವರು ಸ್ಥಾಪಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಉಳಿಸುವುದೇ ಪಕ್ಷದ ಉದ್ದೇಶವಾಗಿತ್ತು.
``ಆನಂದ್‍ಭವನ್ ಅನ್ನು ಮಾರುವ ಸಂದರ್ಭ ಎದುರಾದರೂ ನಾನು ನ್ಯಾಷನಲ್ ಹೆರಾಲ್ಡ್ ಅನ್ನು ಮುಚ್ಚಲು ಬಿಡುವುದಿಲ್ಲ'' ಎಂದು ನೆಹರೂ ನುಡಿದಿದ್ದರು. ಅದು ಅವರ
ಆಸೆಯೂ ಆಗಿತ್ತು. ಹೆರಾಲ್ಡ್ ಅನ್ನು ಪ್ರಕಟಿಸುತ್ತಿದ್ದ ಎಜೆಎಲ್ ಕಂಪನಿಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ತನ್ನ ನೌಕರರಿಗೆ ವೇತನ ನೀಡಲು, ತೆರಿಗೆ ಪಾವತಿಸಲೂ ಕಂಪನಿಯಲ್ಲಿ
ಹಣವಿರಲಿಲ್ಲ. ಮಾರ್ಚ್ 2008ರ ವೇಳೆಗೆ ಕಂಪನಿ ಸುಮಾರು ರು.6 ಕೋಟಿ ನಷ್ಟ ಅನುಭವಿಸಿತು. ಇದನ್ನು ಮೇಲೆತ್ತುವ ಸಲುವಾಗಿ ಪಕ್ಷವು ಎಜೆಎಲ್‍ಗೆ ಚೆಕ್ ಮೂಲಕ ಸಾಲ ನೀಡಿತು. ಬಳಿಕ ಎಜೆಎಲ್ ಷೇರುದಾರರ ಒಪ್ಪಿಗೆ ಪಡೆದು, ಎಜೆಎಲ್ ಅನ್ನು ಯಂಗ್‍ಇಂಡಿಯಾಗೆ ಸೇರಿಸಲಾಯಿತು... ಹೀಗೆ ಕಾಂಗ್ರೆಸ್ ಶನಿವಾರ ಸರಣಿ ಟ್ವೀಟ್‍ಗಳ ಮಳೆಯನ್ನೇ ಹರಿಸಿತು.
ಕಾಂಗ್ರೆಸ್- ಭ್ರಷ್ಟಾಚಾರ ಮೇಡ್ ಫಾರ್ ಈಚ್ ಅದರ್: ಕಾಂಗ್ರೆಸ್ ನಾಯಕರು ಜಾಮೀನು ಪಡೆದು ವಾಪಸ್ ಬಂದ ಬಳಿಕ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ, ``ಕಾಂಗ್ರೆಸ್ ಮತ್ತು
ಭ್ರಷ್ಟಾಚಾರವು ಮೇಡ್ ಫಾರ್ ಈಚ್ ಅದರ್'' ಎಂದು ಆರೋಪಿಸಿತು. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ, ``ನೀವು (ಕಾಂಗ್ರೆಸ್) ಪ್ರತಿಪಕ್ಷ ಸ್ಥಾನದಲ್ಲಿದ್ದರೂ, ಭ್ರಷ್ಟಾಚಾರ ಮತ್ತು ದುರ್ಬಲ ಆಡಳಿತದ ರಾಜನಾಗಿಯೇ ಮುಂದುವರಿದಿದ್ದೀರಿ.
ನ್ಯಾಷನಲ್ ಹೆರಾಲ್ಡ್ ಪ್ರಕರಣವು ನಿಮ್ಮ ನಾಯಕತ್ವದ ತುತ್ತತುದಿಯವರೆಗೂ ತಲುಪಿದೆ. ಅದಕ್ಕೆ ಬಿಜೆಪಿಯೇನು ಮಾಡಲು ಸಾಧ್ಯ? ನಿಮ್ಮ ದರ್ಪವು ನಿಮಗೇ ಹಾನಿ ಉಂಟುಮಾಡಲಿದೆ'' ಎಂದಿದ್ದಾರೆ. ಸ್ವಾಮಿಯನ್ನು ಕಾಂಗ್ರೆಸ್ ಮುಗಿಸುವ ಭೀತಿಯಿದೆ: ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕರನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯನ್ನು ಕಾಂಗ್ರೆಸ್ ದೈಹಿಕವಾಗಿ ಮುಗಿಸುವ ಸಾಧ್ಯತೆಯಿದೆ.
ಇಂತಹುದೊಂದು ಗಂಭೀರ ಆರೋಪ ಮಾಡಿದ್ದು ಬಿಜೆಪಿ ನಾಯಕ ಜಿವಿಎಲ್ ನರಸಿಂಹರಾವ್. ಸ್ವಾಮಿ ಅವರಿಗೆ ಜೀವ ಬೆದರಿಕೆಯಿದೆ ಎಂದು ಗೃಹ
ಸಚಿವಾಲಯವೇ ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಝೆಡ್ ಕೆಟಗರಿ ಭದ್ರತೆ ಒದಗಿಸಲಾಗಿದೆ ಎಂದೂ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರರಾದ ಸುಷ್ಮಿತಾ ದೇವ್, ``ತಾಕತ್ತಿದ್ದರೆ ಈ ಆರೋಪಕ್ಕೆ ಸಂಬಂಧಿಸಿ ಪುರಾವೆ ಒದಗಿಸಿ'' ಎಂದಿದ್ದಾರೆ.