ನವದೆಹಲಿ: ವಾಯುಮಾಲಿನ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಸರ್ಕಾರ ಗುರುವಾರ ಸಂಚಾರ ದಟ್ಟಣೆ ನಿಯಂತ್ರಿಸಲು ಸಮ ಮತ್ತು ಬೆಸ ಸಂಖ್ಯೆ ಸಂಚಾರ ನಿಯಮದ ಬ್ಲ್ಯೂಪ್ರಿಂಟ್ ವೊಂದನ್ನು ಬಿಡುಗಡೆ ಮಾಡಿದೆ.
ಸಮ, ಬೆಸ ನಿಯಮ ಜಾರಿಯು ಇನ್ನು ಕೆಲವೇ ದಿನಗಳಲ್ಲಿ ಜಾರಿಯಾಗಲಿದ್ದು, ನಿಯಮ ಕುರಿತ ಬ್ಲ್ಯೂಪ್ರಿಂಟ್ ವೊಂದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಿಡುಗಡೆ ಮಾಡಿದ್ದಾರೆ. ಸಮ, ಬೆಸ ನಿಯಮವೊಂದು ಸಾರ್ವಜನಿಕ ನಿಯಮವಾಗಿದ್ದು ಕೇಜ್ರಿವಾಲ್ ಬಿಡುಗಡೆ ಮಾಡಿರುವ ಬ್ಲ್ಯೂಪ್ರಿಂಟ್ ನಲ್ಲಿ ಸಾಕಷ್ಟು ಅಂಶಗಳು ಒಳಗೊಂಡಿದೆ.
ಈ ಕುರಿತಂತೆ ಮಾತನಾಡಿರುವ ಕೇಜ್ರಿವಾಲ್ ಅವರು, ಮಹಿಳಾ ಚಾಲಕರು, ದ್ವಿಚಕ್ರ ವಾಹನ ಚಾಲಕರು ಹಾಗೂ ವಿಐಪಿಗಳಿಗೆ ನಿಯಮಗಳಲ್ಲಿ ವಿನಾಯಿತಿಯಿದ್ದು, ಉಳಿದೆಲ್ಲರಿಗೂ ನಿಯಮ ಅನ್ವಯವಾಗಲಿದೆ. ನಿಯಮ ಉಲ್ಲಂಘಿಸಿದವರಿಗೆ ರು.2 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದಲ್ಲದೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾಪತಿ, ಗವರ್ನರ್, ಸುಪ್ರೀಂಕೋರ್ಟ್ ಸಿಜೆಐ, ಹೈ ಕೋರ್ಟ್ ನ್ಯಾಯಾಧೀಶರಿಗೆ ನಿಯಮದಲ್ಲಿ ವಿನಾಯಿತಿ ಇದೆ. ಇನ್ನುಳಿದಂತೆ ಅಗ್ನಿಶಾಮಕ ದಳ, ಪೊಲೀಸ್, ಆ್ಯಂಬುಲೆನ್ಸ್ ಹಾಗೂ ಹೊರ ರಾಜ್ಯದಿಂದ ಬರುವ ಮುಖ್ಯಮಂತ್ರಿಗಳಿಗೆ ವಿನಾಯಿತಿ ಇದೆ ಎಂದು ಹೇಳಿದ್ದಾರೆ.
ಜನವರಿ 1 ರಿಂದ 15ರವರೆಗೆ ಪ್ರಾಯೋಗಿಕವಾಗಿ ಸಮ ಬೆಸ ನಿಯಮ ಜಾರಿಯಾಗಲಿದೆ. ಈ ನಿಯಮ ವಾರದಲ್ಲಿ 6 ದಿನಗಳ ಕಾಲ ಜಾರಿಯಾಗಲಿದ್ದು, ಭಾನುವಾರ ಮಾತ್ರ ನೂತನ ನಿಯಮ ಜಾರಿಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
Advertisement