ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದಿಢೀರ್ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದ್ದು, ಇಂತಹ ಗಂಭೀರ ವಿಷಯವನ್ನು ಟ್ವಿಟರ್ ಮೂಲಕ ತಿಳಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
'ಪ್ರಧಾನಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವ ವಿಷಯ ನಾವು ಟ್ವಿಟರ್ ಮೂಲಕ ತಿಳಿದುಕೊಳ್ಳುತ್ತಿರುವ ದುರದೃಷ್ಟಕರ. ಭಾರತ-ಪಾಕಿಸ್ತಾನ ಸಂಬಂಧ ಸರಿಯಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೊಂದು ದೇಶದಿಂದ ಮರಳುವಾಗ ಮಾರ್ಗ ಮಧ್ಯೆ ಅಲ್ಲಿಗೆ ಭೇಟಿ ನೀಡುವುದು ಎಷ್ಟು ಸರಿ' ಎಂದು ಕಾಂಗ್ರೆಸ್ ವಕ್ತಾರ ಅಜಯ್ ಕುಮಾರ್ ಅವರು ಪ್ರಶ್ನಿಸಿದ್ದಾರೆ.
'ಇತ್ತೀಚಿಗಷ್ಟೇ ಸಂಸತ್ ಅಧಿವೇಶನ ಮುಕ್ತಾಯಗೊಂಡಿದ್ದು, ಈ ವೇಳೆ ಪಾಕ್ ಭೇಟಿಯ ವಿಷಯ ಬಹಿರಂಗಪಡಿಸದೇ ಸಂಸತ್ ಮತ್ತು ದೇಶದ ಜನರನ್ನು ಕತ್ತಲಲ್ಲಿಟ್ಟಿದ್ದು ಏಕೆ? ಪ್ರಧಾನಿ ಮೋದಿ ದೇಶ ಜನತೆ ಮತ್ತು ಸಂಸತ್‌ನ್ನು ಏಕೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ' ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕ ಮನಿಶ್ ತಿವಾರಿ ಅವರು, ಪ್ರಧಾನಿ ಮೋದಿ ದಿಢೀರ್ ಭೇಟಿ ನೀಡುವ ಮೂಲಕ ದೊಡ್ಡ ಸಾಹಸ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
'ಪ್ರಧಾನಿಯ ಈ ಸಾಹಸ ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರಲಿದೆ. ಎನ್‌ಎಸ್‌ಎ ಮಾತುಕತೆ ಹಾಗೂ ಹಾರ್ಟ್ ಆಫ್ ಏಷ್ಯಾ ಸಭೆಯ ನಂತರವೂ ಭಾರತ-ಪಾಕಿಸ್ತಾನ ಸಂಬಂಧದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ತಳಮಟ್ಟದಲ್ಲಿ ಯಾವ ಬದಲಾವಣೆಯಾಗಿದೆ ಎಂಬುದನ್ನು ಪ್ರಧಾನಿಯೇ ಉತ್ತರಿಸಬೇಕು' ಎಂದು ತಿವಾರಿ ಹೇಳಿದ್ದಾರೆ.