
ನವದೆಹಲಿ: ವಾಯು ಮಾಲಿನ್ಯ ನಿಯಂತ್ರಿಸಲು ದೆಹಲಿ ಆಮ್ ಆದ್ಮಿ ಸರ್ಕಾರ ಕೈಗೊಂಡಿರುವ 'ಸಮ' ಮತ್ತು 'ಬೆಸ' ಸಂಖ್ಯೆಯ ವಾಹನ ಸಂಚಾರ ನಿಯಮದಲ್ಲಿ ದ್ವಿಚಕ್ರ ಹಾಗೂ ಮಹಿಳೆಯರಿಗೆ ನೀಡಿರುವ ವಿನಾಯಿತಿ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ದೆಹಲಿ ಹೈ ಕೋರ್ಟ್ ಬುಧವಾರ ಪ್ರಶ್ನೆ ಮಾಡಿದೆ.
ವಾಯುಮಾಲಿನ್ಯ ತಡೆಗಟ್ಟಲು ದೆಹಲಿ ಸರ್ಕಾರ ಜಾರಿಗೆ ತಂದ ಸಮ, ಬೆಸ ನಿಯಮ ಕುರಿತಂತೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಈ ನಿಯಮ ಕುರಿತಂತೆ ಇಂದು ವಿಚಾರಣೆ ನಡೆಸಿರುವ ದೆಹಲಿ ನ್ಯಾಯಾಲಯವು ನಿಯಮದಲ್ಲಿ ಮಹಿಳೆ ಹಾಗೂ ದ್ವಿಚಕ್ರ ಸವಾರರಿಗೆ ಯಾವ ಕಾರಣಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಅರವಿಂದ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದೆ.
ವಾಯುಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಸರ್ಕಾರವು ವಾಯುಮಾಲಿನ್ಯ ನಿಯಂತ್ರಣ ಮಾಡಲು ಸಮ ಮತ್ತು ಬೆಸ ಸಂಖ್ಯೆಗಳ ಕಾರುಗಳ ಸಂಚಾರ ನಿಯಮವನ್ನು ಘೋಷಿಸಿತ್ತು. ಈ ನಿಯಮಗಳು ಜನವರಿ 1 ರಿಂದ ಜಾರಿಯಾಗಲಿದೆ. ಇದರಂತೆ ನಿಯಮದ ಬ್ಲ್ಯೂಪ್ರಿಂಟ್ ವೊಂದನ್ನು ಕೇಜ್ರಿವಾಲ್ ಅವರು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು. ನಿಯಮದಲ್ಲಿ ಮಹಿಳೆ, ದ್ವಿಚಕ್ರವಾಹನ, ಅಗ್ನಿ ಶಾಮಕದಳ, ಪೊಲೀಸ್, ಆ್ಯಂಬುಲೆನ್ಸ್, ಲೋಕಸಭೆ ಸ್ಪೀಕರ್, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸುಪ್ರೀಂ-ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ವಿನಾಯಿತಿ ನೀಡಲಾಗಿತ್ತು.
ಈ ನಿಯಮವನ್ನು ಜನವರಿ 1 ರಿಂದ 15ರವರೆಗಿ ಜಾರಿಗೊಳಿಸಲಾಗುತ್ತಿದ್ದು, ತದನಂತರ ನಿಯಮಗಳ ಬಗ್ಗೆ ಮೌಲ್ಯಮಾಪನ ಮಾಡಿ ಧೀರ್ಘಕಾಲಿಕ ಜಾರಿ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಕೇಜ್ರಿವಾಲ್ ಅವರು ಹೇಳಿದ್ದಾರೆ.
ಈ ನಿಯಮ ಕುರಿತಂತೆ ದೆಹಲಿಯಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಪ್ರಸ್ತುತ ಸಂಚಾರಿ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದ್ದು, ಮಾಲಿನ್ಯ ತಡೆಗಟ್ಟಲು ಸರ್ಕಾರ ಕೆಟ್ಟ ನಿರ್ಧಾರಗಳನ್ನು ಕೈಗೊಳಅಳುತ್ತಿದೆ. ಮಾಲಿನ್ಯವೇ ಇಲ್ಲದಂತೆ ಮಾಡಲು ಯಾವುದೇ ಪರಿಹಾರವಿಲ್ಲ ಎಂಬ ಹಲವು ಟೀಕೆಗಳು ವ್ಯಕ್ತವಾಗಿತ್ತು.
Advertisement