
ನವದೆಹಲಿ: ಪ್ರೀತಿಯಿಂದ ಸಾಕಿ ಸಲಹಿದ ಅಪ್ಪನ ಪಾರ್ಥಿವ ಶರೀರದ ಮುಂದೆ ಆಕೆ ನಿಂತಿದ್ದಳು, ಕಣ್ಣೀರು ಎಡೆಬಿಡದೆ ಸುರಿಯುತ್ತಿತ್ತು, ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದ ಆ 11ರ ಬಾಲಕಿ, ವೀರಮರಣವನ್ನಪ್ಪಿದ ತಂದೆಗೆ ಸೆಲ್ಯೂಟ್ ಮಾಡುತ್ತಾ, ಆಕ್ರೋಶ
ಭರಿತಳಾಗಿ ಯುದ್ಧ ಘೋಷಣೆ ಮಾಡಿಬಿಟ್ಟಳು- `ಜೈ ಮಹಾ ಕಾಳಿ, ಆಯೋ ಗೋರ್ಖಾಳಿ'. ಆ ಬಾಲಕಿ ಬೇರ್ಯಾರೂ ಅಲ್ಲ. ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿಯಿಂದ `ಯುದ್ಧ ಸೇವಾ ಪದಕ' ಪಡೆದ ಮಾರನೇ ದಿನವೇ ಹುತಾತ್ಮರಾದ ಕರ್ನಲ್ ಎಂ.ಎನ್. ರಾಯ್ ಅವರ ಪುತ್ರಿ ಅಲ್ಕಾ ರಾಯ್ . ಹುತಾತ್ಮ ತಂದೆಗೆ ಯುದ್ಧ ಘೋಷದ ಮೂಲಕ ಮಗಳು ಅಂತಿಮ ನಮನ ಸಲ್ಲಿಸುತ್ತಿದ್ದರೆ, ಪಕ್ಕದಲ್ಲೇ ನೆರೆದಿದ್ದ ಯೋಧರು ಒಂದು ಕ್ಷಣ ನಡುಗಿಹೋದರು. ಜತೆಗೆ ಆಕೆಯ ಘೋಷಣೆಗೆ ತಾವೂ ಧ್ವನಿಗೂಡಿಸಿದರು. ಜ.28ರಂದು ಕ. ರಾಯ್ ಅಂತ್ಯಸಂಸ್ಕಾರದಲ್ಲಿ ನಡೆದ ಈ ಘಟನೆ ಈಗ ಸಂಚಲನಕ್ಕೆ ಕಾರಣವಾಗಿದೆ. ಅಲ್ಕಾ ರಾಯ್ `ಯುದ್ಧ ಕರೆ'ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಂತಹ ನೋವಿನ ಸಂದರ್ಭದಲ್ಲೂ ಬಾಲಕಿ ತೋರಿಸಿದ ಧೈರ್ಯವು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ. ಆಲ್ಕಾ ತಂದೆ ಕರ್ನಲ್ ರಾಯ್ (39) ಅವರು
2/9 ಗೂರ್ಖಾ ರೈಫಲ್ಸ್ ನ ಅಧಿಕಾರಿಯಾಗಿದ್ದು, ಹತ್ಯೆಗೀಡಾಗುವ ವೇಳೆ 42 ರಾಷ್ಟ್ರೀಯ ರೈಫಲ್ಸ್ ನ ನೇತೃತ್ವ ವಹಿಸಿದ್ದರು. ಜ.27ರಂದು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ಜತೆ ನಡೆದ ಗುಂಡಿನ ಚಕಮಕಿ ವೇಳೆ ಅವರು ಹುತಾತ್ಮರಾದರು. ಇವರು ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗುವನ್ನು ಅಗಲಿದ್ದಾರೆ.
ದೇಶದ ಹೆಮ್ಮೆಯ ಪುತ್ರಿ ಅಲ್ಕಾ
11 ವರ್ಷದ ಅಲ್ಕಾ ರಾಯ್ ಕೊನೆಯ ಬಾರಿಗೆ ತಂದೆಗೆ ಸೆಲ್ಯೂಟ್ ಮಾಡಿದಳು! ತನ್ನ ನೋವನ್ನೂ ಮೀರಿ ಗೋರ್ಖಾ ಸಮರ ಕರೆಯನ್ನು ಘೋಷಿಸಿದಳು- ಅಯೋ ಗೋರ್ಖಾಳಿ!
ಕರ್ನಲ್ ಎಂ.ಎನ್. ರಾಯ್ ಅವರ ಬದುಕು ಅಂತ್ಯವಾಗಿರಬಹುದು, ಆದರೆ ಅವರ ಸ್ಪೂ ರ್ತಿ, ಅವರ ಆದರ್ಶಮತ್ತು ಧೈರ್ಯ ಎಂದೆಂದಿಗೂ ನಮ್ಮೊಂದಿಗೆ ಜೀವಂತವಾಗಿರಲಿದೆ.
ಅಲ್ಕಾಳು ತಂದೆಯ ಶರೀರದ ಮುಂದೆ ನಿಂತು ಘೋಷಿಸಿದ ಯುದ್ಧ ಕರೆ ಮತ್ತು ಸೆಲ್ಯೂಟ್ ಅಲ್ಲಿದ್ದ ಗೋರ್ಖಾ ಅಧಿಕಾರಿಗಳು ಮತ್ತು ಯೋಧರಿಗೂ ಅದನ್ನು ಪುನರುಚ್ಚರಿಸುವಂತೆ ಮಾಡಿತು. ಆಕೆ ಹೆಮ್ಮೆಯ ಪುತ್ರಿ. ನಮಗೆ ನಿನ್ನ ಬಗ್ಗೆಯೂ ಹೆಮ್ಮೆಯಾಗುತ್ತಿದೆ ಅಲ್ಕಾ. ಈ ಪುಟಾಣಿ ಬಾಲಕಿಯ ಧೈರ್ಯ ನಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ.
-ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ
Advertisement