ಸುಳ್ಳು ಪ್ರಮಾಣ ಪತ್ರಕ್ಕೆ ಸದಸ್ಯತ್ವ ರದ್ದು: ಸುಪ್ರೀಂ

ದೆಹಲಿ ವಿಧಾನಸಭಾ ಚುನಾವಣೆಗಿನ್ನು ಒಂದೇ ದಿನ ಬಾಕಿ ಇದೆ ಎನ್ನುವಾಗಲೇ ರಾಜಕೀಯದಲ್ಲಿ ಅಫರಾಧೀಕರಣ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗಿನ್ನು ಒಂದೇ ದಿನ ಬಾಕಿ ಇದೆ ಎನ್ನುವಾಗಲೇ ರಾಜಕೀಯದಲ್ಲಿ ಅಫರಾಧೀಕರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.

ಯಾವುದೇ ಜನಪ್ರತಿನಿಧಿ ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣ ಪತ್ರದಲ್ಲಿ ತನ್ನ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿ ಮುಚ್ಚಿಟ್ಟಿದ್ದರೆ ಆತನ ಸದಸ್ಯತ್ವ ರದ್ದುಗೊಳಿಸಬುಹುದ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಕ್ರಿಮಿನಲ್ ಪ್ರಕರಣಗಳ ಕುರಿತು ನಾಮಪತ್ರ ಸಲ್ಲಿಸುವ ವೇಳೆ ಮಾಹಿತಿ ನೀಡದೇ ಇರುವುದು ರಾಜಕೀಯ ಭ್ರಷ್ಟಾಚಾರದ ಚಾಳಿ. ಇದು ಅಭ್ಯರ್ಥಿಯ ಪೂರ್ವಾಪರ ತಿಳಿಯುವ ಮತದಾರರ ಹಕ್ಕಿನ ಉಲ್ಲಂಘನೆಯಾಗುತ್ತದೆ. ಎಲ್ಲ ಅಭ್ಯರ್ಥಿಗೂ ತನ್ನ ವಿರುದ್ಧ ಬಾಕಿ ಇರುವ ಗಂಭೀರ ಪ್ರಕರಣಗಳ ಕುರಿತು ವಿಶೇಷ ಮಾಹಿತಿ ಇದ್ದೇ ಇರುತ್ತದೆ. ಹಾಗಾಗಿ ಆತನ ಆ ಮಾಹಿತಿ ಮುಚ್ಚಿಡುವುದು ಸರಿಯಲ್ಲ. ಒಂದು ವೇಳೆ ಅಂಥ ಅಭ್ಯರ್ಥಿ ಗೆದ್ದು ಬಂದರೆ ಆ ಚುನಾವಣೆಯನ್ನು ರದ್ದು ಮಾಡುವ ಅಧಿಕಾರ ಚುನಾವಣಾ ನ್ಯಾಯಾಧಿಕರಣಕ್ಕಿದೆ ಎಂದು ಕೋರ್ಟ್ ತಿಳಿಸಿದೆ.

ಕೊಯಂಬತ್ತೂರಿನ ಕೃಷ್ಣಮೂರ್ತಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. 2006ರಲ್ಲಿ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೃಷ್ಣ ಮೂರ್ತಿ ಸದಸ್ಯತ್ವವನ್ನು ಚುನಾವಣಾ ನ್ಯಾಯಾಧೀಕರಣ ರದ್ದು ಮಾಡಿತ್ತು.

ನಾಮಪತ್ರ ಸಲ್ಲಿಸುವ ವೇಳೆ ತನ್ನ ಮೇಲಿದ್ದ ಕ್ರಿಮಿನಲ್ ಪ್ರಕರಣಗಳ ಕುರಿತ ಮಾಹಿತಿ ಮುಚ್ಚಿಟ್ಟಿದ್ದ ಕಾರಣಕ್ಕೆ ನ್ಯಾಯಾಧಿಕರಣ ಈ ಆದೇಶ ನೀಡಿತ್ತು ಮದ್ರಾಸ್ ಹೈಕೋರ್ಟ್ ಕೂಡ ನ್ಯಾಯಾಧಿಕರಣದ ತೀರ್ಪು ಎತ್ತಿ ಹಿಡಿಯಿತು. ಇದನ್ನು ಪ್ರಶ್ನಿಸಿ ಕೃಷ್ಣಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಜತೆಗೆ, ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ಆತನಿಗೆ ರು.50 ಸಾವಿರ ದಂಡವನ್ನೂ ವಿಧಿಸಿದೆ.

ಜುಲೈ 2013ರಲ್ಲಿ ನೀಡಿದ್ದ ಮಹತ್ವದ ತೀರ್ಪಿನಲ್ಲಿ ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದರೆ ಮತ್ತು ಎರಡು ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ ಅಂಥ ಜನಪ್ರತಿನಿಧಿಯ ಸದಸ್ಯತ್ವ ತಕ್ಷಣದಿಂದಲೇ ಅನರ್ಹಗೊಳ್ಳಬೇಕು ಎಂದು ಸುಪ್ರೀಂ ಹೇಳಿತ್ತು.

ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಜೈಲು ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡು ಸಿಎಂ ಜಯಲಲಿತಾ ಕೂಡ ಈ ತೀರ್ಪಿನಿಂದಾಗಿ ತಮ್ಮ ಕುರ್ಚಿ ಕಳೆದುಕೊಂಡಿದ್ದಾರೆ. ಬಹುತೇಕ ಅವರ ರಾಜಕೀಯ ಬದುಕೇ ಈಗ ಮುಕ್ತಾಯವಾದಂತಾಗಿದೆ.

ದೆಹಲಿ ಚುನಾವಣೆಗೆ ಇನ್ನೇನು ಒಂದೇ ದಿನ ಇದೆ ಎನ್ನುವಾಗಲೇ ನ್ಯಾಯಾಲಯ ನೀಡಿದ ಈ ತೀರ್ಪು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಕೋರ್ಟ್ ಹೇಳಿದ್ದೇನು?
ಮಾಹಿತಿ ಮುಚ್ಚಿಡುವುದು ಪ್ರಜಾಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 100(1)(ಬಿ) ಪ್ರಕಾರ ಭ್ರಷ್ಟಾಚಾರ
ಇಂಥ ಕಾರಣಕ್ಕಾಗಿ ಚುನಾವಣೆಯನ್ನೇ ರದ್ದು ಮಾಡುವ ಅಧಿಕಾರ ನ್ಯಾಯಾಧಿಕರಣಕ್ಕಿದೆ.

ರಾಜಕೀಯ ಅಪರಾಧೀಕರಣ ಮತ್ತು ಸಾರ್ವಜನಿಕ ಬದುಕಲ್ಲಿ ಭ್ರಷ್ಟಾಚಾರ ಕಡಿವಾಣಕ್ಕೆ ಇಂಥ ಕ್ರಮ ಅತ್ಯಗತ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com