

ನವದೆಹಲಿ: 2002ರಲ್ಲಿ ನಡೆದಿದ್ದ ನಿತೀಶ್ ಕಠಾರ ಹತ್ಯೆ ಪ್ರಕರಣ ಸಂಬಂಧ ಹಂತಕ ಸಹೋದರರಿಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನೇ ಅಂತಿಮಗೊಳಿಸಿದೆ.
ನಿತೀಶ್ ಕಠಾರ ಹಂತಕ ಸಹೋದರರಾದ ವಿಶಾಲ್ ಯಾದವ್ ಮತ್ತು ವಿಕಾಸ್ ಯಾದವ್ ಅವರಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಕೋರಿ ಸಲ್ಲಿಕೆ ಮಾಡಲಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದ್ದು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಅಂತಿಮಗೊಳಿಸಿದೆ. ಅಲ್ಲದೆ ಎಲ್ಲ ಮೂವರು ಅಪರಾಧಿಗಳಿಗೆ ತಲಾ 50 ಲಕ್ಷ ರು.ಗಳ ದಂಡವಿಧಿಸಿದೆ.
2002ರಲ್ಲಿ ನಿತೀಶ್ ಕಠಾರ ಅವರನ್ನು ಅಪಹರಿಸಿದ್ದ ವಿಶಾಲ್ ಯಾದವ್ ಮತ್ತು ವಿಕಾಸ್ ಯಾದವ್ ಎಂಬುವವರು ಸುಖ್‌ದೇವ್ ಎಂಬ ಕಾಂಟ್ರಾಕ್ಟ್ ಕಿಲ್ಲರ್‌ನೊಂದಿಗೆ ಸೇರಿ ಕೊಂದುಹಾಕಿದ್ದರು. ನಿತೀಶ್ ಕಠಾರ ಅವರು ಭಾರತಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು, ಇದೇ ಕಾರಣಕ್ಕಾಗಿ ಅವರನ್ನು ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿತ್ತು. ಪ್ರಕರಣ ಸಂಬಂಧ ಈ ಮೂವರು ಅಪರಾಧಿಗಳ ವಿರುದ್ಧ ಮರ್ಯಾದಾ ಹತ್ಯೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿ 2008 ಮೇ 30ರಂದು ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿತ್ತು.
ಆದರೆ ಅಪರಾಧಿಗಳಿಗೆ ನೀಡಿರುವ ಶಿಕ್ಷೆಯನ್ನು ಹೆಚ್ಚಿಸಬೇಕು ಎಂದು ನಿತೀಶ್ ಕಠಾರ ಅವರ ತಾಯಿ ನೀಲಂ ಕಠಾರ ಮತ್ತು ದೆಹಲಿ ಪೊಲೀಸರು ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ 2014 ಏಪ್ರಿಲ್ 2ರಂದು ತೀರ್ಪು ಪ್ರಕಟ ಮಾಡಿದ್ದ ನ್ಯಾಯಾಲಯ, ಕೆಳ ನ್ಯಾಯಾಲಯದ ಆದೇಶವನ್ನೇ ಎತ್ತಿಹಿಡಿದಿತ್ತು. ನ್ಯಾಯಾಲಯದ ಆದೇಶವನ್ನು ಮರುಪರಿಶೀಲನೆ ಮಾಡಬೇಕು ಎಂದು ಕೋರಿ ಮತ್ತೆ ನೀಲಂ ಕಠಾರ ಅವರು ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ದೆಹಲಿ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಜೀವಾವಧಿ ಶಿಕ್ಷೆಯನ್ನೇ ಜಾರಿ ಮಾಡಿದ್ದಲ್ಲದೇ ಅಪರಾಧಿಗಳಿಗೆ ತಲಾ 50 ಲಕ್ಷ ರು. ದಂಡ ವಿಧಿಸಿದೆ.
ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನೀಲಂ ಕಠಾರ ಅವರು, ನ್ಯಾಯಾಲಯದ ತೀರ್ಪು ತಮಗೆ ಸಮಾಧಾನವನ್ನುಂಟು ಮಾಡಿಲ್ಲ. ಆದರೆ ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇನೆ. ಕನಿಷ್ಟ ಪಕ್ಷ ಆರೋಪಿಗಳ ಶಿಕ್ಷೆಯ ಅವಧಿಯನ್ನು ನ್ಯಾಯಾಲಯ ವಿಸ್ತರಿಸಿದೆ ಎಂದು ಎಂದು ಹೇಳಿದ್ದಾರೆ.