
ನವದೆಹಲಿ: ದೆಹಲಿಯಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ ದಾಖಲಾಗಿದ್ದು, ಯುವತಿಯೊಬ್ಬಳ ಮೇಲೆ ಘೋರ ಸಾಮೂಹಿಕ ಹತ್ಯಾಚಾರ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯರಿಗೆ ರಾಷ್ಟ್ರ ರಾಜಧಾನಿ ಸುರಕ್ಷಿತವಲ್ಲ ಎಂಬ ಮಾತು ಮತ್ತೆ ಸಾಬೀತಾಗಿದ್ದು, ದೆಹಲಿ ಹೊರವಲಯದ ರೋಹ್‌ಟಕ್ ನಲ್ಲಿ 8 ಮಂದಿ ಕಾಮುಕರು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅತ್ಯಮಾನುಷವಾಗಿ ಕೊಲೆಗೈದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು 28 ವರ್ಷದ ಯುವತಿಯ ಶವ ರೋಹ್‌ಟಕ್ ಬಳಿ ಪತ್ತೆಯಾಗಿದ್ದು, ಮೃತ ದೇಹದ ಕೆಲ ಭಾಗಗಳನ್ನು ಬೀದಿನಾಯಿಗಳು ಕಿತ್ತುತಿಂದಿವೆ. ಅಮಾನುಷವೆಂದರೆ ಯುವತಿಯನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡ ಕಾಮುಕರು ಆಕೆಯ ಗುಪ್ತಾಂಗಕ್ಕೆ ಮಡಿಕೆ ಚೂರುಗಳನ್ನು, ಕಲ್ಲಿನ ಚೂರುಗಳನ್ನು ಮತ್ತು ಕಾಂಡೋಮ್‌ಗಳನ್ನು ತುರುಕಿರುವುದು ಬೆಳಕಿಗೆ ಬಂದಿದೆ.
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೇ ಬೆಚ್ಚಿಬಿದ್ದಿದ್ದು, ತಮ್ಮ 30 ವರ್ಷದ ಅನುಭವದಲ್ಲಿ ಇಂತಹ ಘೋರ ಪ್ರಕರಣವನ್ನು ಕಂಡಿರಲಿಲ್ಲ ಎಂದು ಹೇಳಿದ್ದಾರೆ. 'ಯುವತಿಯ ತಲೆಗೆ ಕಬ್ಬಿಣದ ರಾಡ್ ನಿಂದ ಬಲವಾಗಿ ಬಡಿಯಲಾಗಿದೆ. ಇದರಿಂದ ಆಕೆಯ ಪ್ರಜ್ಞೆ ಕಳೆದುಕೊಂಡಿದ್ದು, ಬಳಿಕ ಆಕೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ. ಮೃತ ದೇಹವನ್ನು ಬೀದಿ ನಾಯಿಗಳು ಮತ್ತು ಇಲಿಗಳು ಕಚ್ಚಿ ತಿಂದಿದ್ದು, ಪ್ರಮುಖ ಅಂಗಾಗಗಳೇ ನಾಪತ್ತೆಯಾಗಿವೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಎಸ್‌ಕೆ ದತ್ತರ್ ವಾಲ್ ಅವರು ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈ ಸಂಬಂಧ 8 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ನಾಪತ್ತೆಯಾಗಿರುವ ಮತ್ತೋರ್ವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಬಂಧಿತ ಎಲ್ಲಾ 8 ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಈ ಎಲ್ಲ ವಿದ್ಯಮಾನಗಳಿಂದ ವಿಚಲಿತರಾಗಿರುವ ಮೃತ ಯುವತಿಯ ತಂಗಿ 'ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement