ಕೈ ಸೋಲಿಗೆ ಅಜಯ್ ಮಕೇನ್ ಕಾರಣ: ಶೀಲಾ ದೀಕ್ಷಿತ್

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಅಜಯ್ ಮಕೇನ್ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ...
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ (ಸಂಗ್ರಹ ಚಿತ್ರ)
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ (ಸಂಗ್ರಹ ಚಿತ್ರ)

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಅಜಯ್ ಮಕೇನ್ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಭಿನ್ನಮತ ಭುಗಿಲೆದಿದ್ದು, ಕಾಂಗ್ರೆಸ್ ಮುಖಂಡರು ಪರಸ್ಪರ ಕೆಸರೆರಚಾಟಕ್ಕೆ ಮುಂದಾಗಿದ್ದಾರೆ. ದೆಹಲಿ ಚುನಾವಣಾ ಫಲಿತಾಂಶದ ಕುರಿತು ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು, ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನಕ್ಕೆ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ಅಜಯ್ ಮಕೇನ್ ಅವರೇ ಕಾರಣ ಎಂದು ಶೀಲಾ ದೀಕ್ಷಿತ್ ಹೇಳಿದ್ದಾರೆ.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತದಾರರನ್ನು ತನ್ನತ್ತ ಸೆಳೆಯುವಂತಹ ಪ್ರಭಾವಿ ಪ್ರಚಾರ ನಡೆಸಲಿಲ್ಲ. ಇತರೆ ಪಕ್ಷಗಳಿಗೆ ಹೋಲಿಸಿಕೊಂಡರೆ ಕಾಂಗ್ರೆಸ್ ಪಕ್ಷದ ಪ್ರಚಾರ ಸಪ್ಪೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷದ ಸೋಲಿಗೆ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಅಜಯ್ ಮಕೇನ್ ಅವರೇ ಕಾರಣ ಎಂದು ಶೀಲಾ ಹೇಳಿದ್ದಾರೆ.

ಶೀಲಾ ಹೇಳಿಕೆಗೆ ಕಾಂಗ್ರೆಸ್ ಪಕ್ಷದಲ್ಲೇ ಅಪಸ್ವರ
ಇನ್ನು ದೆಹಲಿ ಚುನಾವಣಾ ಸೋಲಿಗೆ ಸಂಬಂಧಿಸಿದಂತೆ ಶೀಲಾ ದೀಕ್ಷಿತ್ ಅವರು ನೀಡಿರುವ ಹೇಳಿಕೆಗಳನ್ನು ಕಾಂಗ್ರೆಸ್ ಪಕ್ಷ ಅಲ್ಲಗಳೆದಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಪಿಸಿ ಚಾಕೋ, ಶೀಲಾ ದೀಕ್ಷಿತ್ ಅವರ ಹೇಳಿಕೆ ಅವರ ವೈಯುಕ್ತಿಕ ಅಭಿಪ್ರಾಯವೇ ಹೊರತು, ಕಾಂಗ್ರೆಸ್ ಹೇಳಿಕೆಯಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ತೊರೆಯುವುದಿಲ್ಲ: ಮಕೇನ್

ಇದೇ ವೇಳೆ ಶೀಲಾ ದೀಕ್ಷಿತ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಅಜಯ್ ಮಕೇನ್ ಅವರು, ಶೀಲಾ ಅವರ ಹೇಳಿಕೆಯಿಂದ ತಮಗೆ ನೋವಾಗಿದ್ದು, ಅವರು ಯಾವ ಹಿನ್ನಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ತೊರೆಯುವ ಕುರಿತು ಎದ್ದಿರುವ ಊಹಾಪೋಹಗಳ ಕುರಿತು ಮಾತನಾಡಿದ ಮಕೇನ್, ತಾವು ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ದೆಹಲಿ ವಿಧಾನಸಭಾ ಚುನಾವಣೆ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಅನಿರೀಕ್ಷಿತ ಪೆಟ್ಟು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com