

ಬೀಜಿಂಗ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಾಯಂ ಸದಸ್ಯ ಸ್ಥಾನ ಪಡೆಯಲು ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ಚೀನಾದಿಂದ ಬೆಂಬಲ ವ್ಯಕ್ತವಾಗಿದೆ. ಪ್ರಧಾನಿ ಮೋದಿ ಅವರು ಚೀನಾಗೆ ಭೇಟಿ ನೀಡುವ ಮೊದಲೇ ನೆರೆಯ ದೇಶದಿಂದ ಇಂಥದ್ದೊಂದು ಸಂದೇಶ ಹೊರಬಿದ್ದಿದೆ.
ಭಾರತ ಮತ್ತು ಬ್ರೆಜಿಲ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆಯುವ ಮಹತ್ವಾಕಾಂಕ್ಷೆ ಇಟ್ಟು ಕೊಂಡಿವೆ. ಈ ಎರಡು ದೇಶಗಳ ಮಹತ್ವಾಕಾಂಕ್ಷೆಯನ್ನು ನಾವು ಗೌರವಿಸುತ್ತೇವೆ ಎಂದು ಚೀನಾ ಹೇಳಿದೆ. ಆದರೆ, ಇದೇ ರೀತಿ ಭದ್ರತಾ ಮಂಡಳಿ ಕಾಯಂ ಸದಸ್ಯನಾಗಲು ಬಯಸುತ್ತಿರುವ ಜಪಾನ್ ಕುರಿತು ಮಾತ್ರ ಚೀನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮೋದಿ ಬೀಜಿಂಗ್ ಭೇಟಿಗೂ ಮುನ್ನ ಈ ರೀತಿ ಓಲೈಕೆ ನೀತಿ ಅನುಸರಿಸುವ ಮೂಲಕ ಈವರೆಗೆ ಭಾರತದ ವಿರುದ್ಧ ನಕಾರಾತ್ಮಕ ಧೋರಣೆ ಪ್ರದರ್ಶಿಸುತ್ತಲೇ ಬಂದಿದ್ದ ಚೀನಾ ತನ್ನ ನಿಲುವು ಬದಲಿಸುಲು ಆರಂಭಿಸಿದೆ. ಒಂದು ಕಡೆ ಬೆಳೆಯುತ್ತಿರುವ ಭಾರತದ ಅರ್ಥವ್ಯವಸ್ಥೆ, ಇನ್ನೊಂದು ಕಡೆ ಮೋದಿ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅಮೆರಿಕ ಮಾಡುತ್ತಿರುವ ಪ್ರಯತ್ನಗಳಿಂದ ಚೀನಾ ವಿಚಲಿತವಾಗಿ ಇಂಥ ನಿರ್ಧಾರ ತೆಗೆದುಕೊಳ್ಳುತ್ತಿದೆ.