
ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ದಗ್ಗುಬಾಟಿ ರಾಮಾನಾಯ್ಡು ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ರಾಮಾನಾಯ್ಡು ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದಿನಲ್ಲಿ ನಿಧನರಾಗಿದ್ದಾರೆ. ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ರಾಮಾನಾಯ್ಡು ಅವರ ದಿಢೀರ್ ನಿಧನಕ್ಕೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ.
1936 ಜೂನ್ 6ರಂದು ಆಂದ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕಾರಂಚೆಡು ಗ್ರಾಮದಲ್ಲಿ ಜನಿಸಿದ ರಾಮಾನಾಯ್ಡು ಅವರು, ಸುರೇಶ್ ಪ್ರೊಡಕ್ಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಮೂಲಕ ನೂರಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅತ್ಯಧಿಕ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ಕೂಡ ರಾಮಾನಾಯ್ಡು ಅವರ ಸುರೇಶ್ ಪ್ರೊಡಕ್ಷನ್ಸ್ ಸಂಸ್ಥೆಗೆ ಇದೆ. ಸುಮಾರು 15 ಭಾಷೆಗಳಲ್ಲಿ 155ಕ್ಕೂ ಅಧಿಕಿ ಚಿತ್ರಗಳನ್ನು ನಿರ್ಮಿಸಿರುವ ರಾಮಾನಾಯ್ಡು ಅವರು, ಅತ್ಯಧಿಕ ಚಿತ್ರಗಳನ್ನು ನಿರ್ಮಾಣ ಮಾಡಿದ ಹಿನ್ನಲೆಯಲ್ಲಿ ಅವರು ಸುರೇಶ್ ಪ್ರೊಡಕ್ಷನ್ಸ್ ಸಂಸ್ಥೆ ಗಿನ್ನೆಸ್ ದಾಖಲೆಗೂ ಪಾತ್ರವಾಗಿತ್ತು.
ಇದಲ್ಲದೆ 1999ರಿಂದ 2004ರವರೆಗೂ ರಾಮಾನಾಯ್ಡು ಅವರು ಸಂಸದರಾಗಿಯೂ ಸೇವೆಸಲ್ಲಿಸಿದ್ದರು. ಅಲ್ಲದೆ ಚಿತ್ರರಂಗದಲ್ಲಿ ಸೇವೆಸಲ್ಲಿಸಿದ ಹಿನ್ನಲೆಯಲ್ಲಿ ಅವರಿಗೆ 2009ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು 2012 ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು. ಅವರ ಇಬ್ಬರು ಪುತ್ರರು ಕೂಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದು, ಅವರ ಮೊದಲ ಮಗ ಸುರೇಶ್ ಬಾಬು ಅವರು ತೆಲುಗು ಚಿತ್ರರಂಗದಲ್ಲಿ ಖ್ಯಾತ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಅವರ 2ನೇ ಮಗ ವೆಂಕಟೇಶ್ ಅವರು ತೆಲುಗು ಚಿತ್ರರಂಗದ ಪ್ರಮುಖ ನಾಯಕನಟರಾಗಿ ಗುರುತಿಸಿಕೊಂಡಿದ್ದಾರೆ.
ರಾಮಾನಾಯ್ಡು ಅವರ ಮೊಮ್ಮಗ ರಾಣಾ ದಗ್ಗುಬಾಟಿ ಕೂಡ ತೆಲುಗು ಚಿತ್ರರಂಗವಷ್ಟೇ ಅಲ್ಲದೇ ಬಾಲಿವುಡ್ ನಲ್ಲಿಯೂ ಪ್ರಮುಖ ನಟರಾಗಿದ್ದಾರೆ. ಇತ್ತೀಚೆಗ ಬಿಡುಗಡೆಯಾದ ಅಕ್ಷಯ್ ಕುಮಾರ್ ಅಭಿನಯದ ಬೇಬಿ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಒಟ್ಟಾರೆ ರಾಮಾನಾಯ್ಡು ಅವರ ನಿಧನಕ್ಕೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.
Advertisement