
ಹೈದರಾಬಾದ್: ಬುಧವಾರ ನಿಧನರಾದ ಖ್ಯಾತ ನಿರ್ಮಾಪಕ ಡಿ ರಾಮಾನಾಯ್ಡು ಅವರ ಅಂತ್ಯ ಸಂಸ್ಕಾರ ಹೈದರಾಬಾದಿನಲ್ಲಿ ನೆರವೇರುತ್ತಿದೆ.
ಹೈದರಾಬಾದಿನಲ್ಲಿರುವ ರಾಮಾನಾಯ್ಡು ಸ್ಟುಡಿಯೋದಲ್ಲಿ ರಾಮಾನಾಯ್ಡು ಅವರ ಅಂತಿಮ ವಿಧಿವಿಧಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬಹಿರಂಗ ಯಾತ್ರೆಯ ನಂತರ ಅವರ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ. ವಿಶೇಷವಾಗಿ ಸಿದ್ಧಪಡಿಸಲಾಗಿರುವ ವಾಹನದಲ್ಲಿ ರಾಮಾನಾಯ್ಡು ಅವರ ಪಾರ್ಥೀವ ಶರೀರದ ಯಾತ್ರೆ ನಡೆಸಲಾಗುತ್ತಿದೆ. ಸಾರ್ವಜನಿಕ ದರ್ಶನದ ಬಳಿಕ ಈಗಷ್ಟೇ ಅವರ ಪಾರ್ಥೀವ ಶರೀರರವನ್ನು ರಾಮಾನಾಯ್ಡು ಸ್ಟುಡಿಯೋಗೆ ತರಲಾಗಿದ್ದು, ಅಲ್ಲಿಯೇ ಅವರ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ.
ತೆಲುಗು ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ರಾಮಾನಾಯ್ಡು ಅವರಿಗೆ ತೆಲಂಗಾಣ ಸರ್ಕಾರದ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ.
ಅವರ ಪುತ್ರರಾದ ಸುರೇಶ್ ಬಾಬು ಮತ್ತು ವೆಂಕಟೇಶ್ ಅವರು ಸೇರಿದಂತೆ ವಿವಿಧ ಗಣ್ಯರು ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಕೂಡ ಇಂದು ರಾಮಾನಾಯ್ಡು ಸ್ಟುಡಿಯೋಗೆ ಆಗಮಿಸಿ ರಾಮಾನಾಯ್ಡು ಅವರ ಪಾರ್ಥೀವ ಶರೀರದ ದರ್ಶನ ಪಡೆದರು. ಅಂತೆಯೇ ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇನ್ನು ಕೆಸಿಆರ್ ಅವರೊಂದಿಗೆ ಅವರ ಸಂಪುಟದ ಕೆಲ ಸಚಿವರೂ ಕೂಡ ಆಗಮಿಸಿದ್ದರು. ಇದಲ್ಲದೆ ರಾಮಾನಾಯ್ಡು ಸ್ಟುಡಿಯೋದ ಸುತ್ತಮುತ್ತ ಸಾವಿರಾರು ಅಭಿಮಾನಿಗಳು ನೆರೆದಿದ್ದು, ಅಂತಿಮ ಸಂಸ್ಕಾರ ನೋಡಲು ಮುಗಿಬಿದಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ರಾಮಾನಾಯ್ಡು ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದಿನ ನಿವಾಸದಲ್ಲಿ ನಿಧನರಾಗಿದ್ದರು.
Advertisement