ಆಡಳಿತ-ಪ್ರತಿಪಕ್ಷ ಎರಡೂ ಜೆಡಿಯು

ಜೆಡಿಯು ಇಬ್ಭಾಗವಾಗಿರುವ ನಡುವೆಯೇ ನಿತೀಶ್ ಕುಮಾರ್ ಬಣಕ್ಕೆ ಬಿಹಾರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷ ಸ್ಥಾನ ಸಿಕ್ಕಿದೆ...
ನಿತೀಶ್ ಕುಮಾರ್
ನಿತೀಶ್ ಕುಮಾರ್

ಪಟನಾ/ನವದೆಹಲಿ: ಜೆಡಿಯು ಇಬ್ಭಾಗವಾಗಿರುವ ನಡುವೆಯೇ ನಿತೀಶ್ ಕುಮಾರ್ ಬಣಕ್ಕೆ ಬಿಹಾರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷ ಸ್ಥಾನ ಸಿಕ್ಕಿದೆ.

ವಿಧಾನಸಭೆಯಲ್ಲಿ ಬಿಜೆಪಿಯ ನಂದ ಕಿಶೋರ್ ಯಾದವ್ ಜಾಗಕ್ಕೆ ಜೆಡಿಯು ನಾಯಕ ವಿಜಯ್ ಚೌಧರಿ, ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಸ್ಥಾನಕ್ಕೆ ಜೆಡಿಯು ನಾಯಕ ನಿತೀಶ್‍ರನ್ನು ಪ್ರತಿಪಕ್ಷ ನಾಯಕ ಎಂದು ಸ್ಪೀಕರ್ ಘೋಷಿಸಿದ್ದಾರೆ. ಒಂದೇ ಪಕ್ಷ ಆಡಳಿತ ಪಕ್ಷವಾಗಿಯೂ, ಪ್ರತಿಪಕ್ಷವಾಗಿಯೂ ಕಾರ್ಯನಿರ್ವಹಿಸುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಸ್ಪೀಕರ್‍ರ ಈ ನಿರ್ಧಾರವನ್ನು `ನಿರಂಕುಶ' ಎಂದು ಟೀಕಿಸಿರುವ ಬಿಜೆಪಿ, ವಿಧಾನಸಭೆಯ ಮುಂಭಾಗ ದಲ್ಲಿ ಧರಣಿ ಮಾಡಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಶಾಸಕರ ಕುದುರೆ ವ್ಯಾಪಾರವೂ ಭರ್ಜರಿಯಾಗಿ ಸಾಗಿದೆ. ಆರ್‍ಜೆಡಿ ಸಂಸದ ಪಪ್ಪು ಯಾದವ್ ಅವರು ತನಗೆ ಹಣ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿ, ಜಿತನ್ ಪರ ಮತ ಹಾಕುವಂತೆ ಒತ್ತಾಯಿಸಿದ್ದಾರೆ ಎಂದು ಜೆಡಿಯು ಶಾಸಕ ಶರ್ಫುದ್ದೀನ್ ಆರೋಪಿಸಿದ್ದಾರೆ. ನಿತೀಶ್ ವಿರುದ್ಧ `ರೇಡಿಯೋ' ಸಮರ: ನಿತೀಶ್ ಅವರು ಸಿಎಂ ಆಗಿದ್ದಾಗ ಮಹಾದಲಿತರ ಕುಟುಂಬಗಳಿಗೆ ರೇಡಿಯೋಗಳನ್ನು ವಿತರಿಸಿದ್ದರು.

ಎಲ್ಲರಿಗೂ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಯಬೇಕು ಎಂಬುದೇ ಇದರ ಉದ್ದೇಶವಾಗಿತ್ತು. ಈಗ ಇದೇ ರೇಡಿಯೋ ಮೂಲಕ ಬಿಜೆಪಿ `ನಿತೀಶ್ ಅವರು ಮಹಾದಲಿತರಿಗೆ ಹೇಗೆ ದ್ರೋಹ ಮಾಡಿದರು' ಎಂಬುದನ್ನು ವಿವರಿಸಲು ಹೊರಟಿದೆ. ಇದೇ ವೇಳೆ, ಸ್ಪೀಕರ್ ಉದಯ್  ನಾರಾಯಣ್ ಚೌಧರಿ ಅವರನ್ನು ವಿಶ್ವಾಸಮತದಿಂದ ದೂರವಿಡಬೇಕು ಎಂದು ಕೋರಿ ಸಚಿವ ವಿನಯ್ ಬಿಹಾರಿ ಸಲ್ಲಿಸಿದ್ದಅರ್ಜಿಯನ್ನು ಪಟನಾ ಹೈಕೋರ್ಟ್ ವಜಾ ಮಾಡಿದೆ.

ಸೋಲುತ್ತಾರೆಯೇ  ಮಾಂಝಿ?

ಅನುಮಾನವೇ ಇಲ್ಲ, ಶುಕ್ರವಾರ ಬಿಹಾರ ರಾಜಕೀಯ ಹಾಗೂ ಮಾಂಝಿಗೆ ನಿರ್ಣಾಯಕ ದಿನ. ಸದ್ಯದ ಪರಿಸ್ಥಿತಿ ನೋಡಿದರೆ ಅವರು ಸಿಎಂ ಹುದ್ದೆಯಿಂದ ನಿರ್ಗಮಿಸುವುದು ಬಹುತೇಕ ಖಚಿತ. ಮಾಂಝಿ ಸಿಎಂ ಆಗಿ ಮುಂದುವರಿಯಬೇಕೆಂದರೆ ಅವರಿಗೆ 117 ಮತಗಳು ಬೇಕು. ಬಿಜೆಪಿಯ ಶಾಸಕರ ಸಂಖ್ಯೆ87. ಮಾಂಝಿಗೆ ಜೆಡಿಯುನ ಕೇವಲ 12 ಶಾಸಕರ ಬೆಂಬಲವಿದೆ. ಅಂದರೆ ಒಟ್ಟು 99 ಆಗುತ್ತದೆ. ಹೀಗಾಗಿ ಮಾಂಝಿ ವಿಶ್ವಾಸಮತದ ಅಗ್ನಿಪರೀಕ್ಷೆಯಲ್ಲಿ ಸೋಲುವ ಸಾಧ್ಯತೆ ದಟ್ಟವಾಗಿದೆ. ಜತೆಗೆ, ಜೆಡಿಯುನ 8 ಬಂಡುಕೋರ ಶಾಸಕರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಪಟನಾ ಹೈಕೋರ್ಟ್ ತೀರ್ಪು ನೀಡಿದೆ. ಈ ಬೆಳವಣಿಗೆ ಮಾಂಝಿಗೆ ಪ್ರತಿಕೂಲವಾಗಿ ಪರಿಣಮಿಸಲಿದೆ. ಇನ್ನೊಂದೆಡೆ, ಜೆಡಿಯು ನಾಯಕ ನಿತೀಶ್ ಕುಮಾರ್ ಅವರಿಗೆ 120 ಶಾಸಕರ ಬೆಂಬಲವಿದ್ದು, ಅವರು ಮತ್ತೊಮ್ಮೆ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಬಹುತೇಕ ಖಚಿತ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com