'ಥರ್ಡ್ ಕ್ಲಾಸ್ ಆಂಧ್ರ': ಕೆಸಿಆರ್ ವ್ಯಂಗ್ಯ

ಆಂಧ್ರಪ್ರದೇಶದ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು, 'ಥರ್ಡ್ ಕ್ಲಾಸ್ ಆಂಧ್ರಪ್ರದೇಶ' ತೆಲಂಗಾಣದೊಂದಿಗೆ ಸ್ಪರ್ಧಿಸುವುದನ್ನು ಬಿಡಬೇಕು ಎಂದು ಕಿಡಿಕಾರಿದ್ದಾರೆ...
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್

ಹೈದರಾಬಾದ್: ಆಂಧ್ರಪ್ರದೇಶದ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು, 'ಥರ್ಡ್ ಕ್ಲಾಸ್ ಆಂಧ್ರಪ್ರದೇಶ' ತೆಲಂಗಾಣದೊಂದಿಗೆ ಸ್ಪರ್ಧಿಸುವುದನ್ನು ಬಿಡಬೇಕು ಎಂದು ಕಿಡಿಕಾರಿದ್ದಾರೆ.

ಭಾನುವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ಆಂಧ್ರಪ್ರದೇಶದ ಪತ್ರಕರ್ತರು ಪರ, ವಿರೋಧ ಎಂದು ತಾರತಮ್ಯ ಮಾಡಬಾರದು. ಆಂಧ್ರಪ್ರದೇಶ ಸರ್ಕಾರ ಪ್ರತಿಯೊಂದು ವಿಷಯದಲ್ಲೂ ತೆಲಂಗಾಣವನ್ನು ಹೋಲಿಸುತ್ತಲೇ ಇರುತ್ತದೆ. ತೆಲಂಗಾಣ ಸರ್ಕಾರ ಆಂಧ್ರಪ್ರದೇಶ ಸರ್ಕಾರಕ್ಕಿಂತ ಉತ್ತಮವಾಗಿದ್ದು, ಆಂಧ್ರಪ್ರದೇಶದ ಜನಸಂಖ್ಯೆಗಿಂತ ತೆಲಂಗಾಣದಲ್ಲಿ ಅಧಿಕ ಜನಸಂಖ್ಯೆಯಿದೆ. ಈ ಕಾರಣದಿಂದಲೇ ನಮ್ಮ ಸರ್ಕಾರ ಜನರಿಗೆ ಶೇ.43 ರಷ್ಟು ಉದ್ಯೋಗಾವಕಾಶವನ್ನು ಸೃಷ್ಟಿಸಿರುವುದು. ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದರಿಂದ ಆಂಧ್ರಪ್ರದೇಶ ತನ್ನ ಪ್ರತಿಷ್ಠೆಯನ್ನು ತಾನೇ ಕಳೆದುಕೊಳ್ಳಲಿದೆ ಎಂದು ಹೇಳಿದರು.

ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ಕೇರಳದೊಂದಿಗೆ ತನ್ನನ್ನು ಹೋಲಿಕೆಮಾಡಿಕೊಳ್ಳುತ್ತಿದೆಯೇ ವಿನಃ, ಯಾವುದೇ ಕಾರಣಕ್ಕೂ ಆಂಧ್ರಪ್ರದೇಶದೊಂದಿಗೆ ತನ್ನನ್ನು ಹೋಲಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೆ, ಕೆಲವು ಮಾಧ್ಯಮಗಳು ನಮ್ಮ ಸರ್ಕಾರವನ್ನು ಗುರಿಯಿಟ್ಟುಕೊಂಡು ಋಣಾತ್ಮಕವಾಗಿ ಸುದ್ದಿ ಮಾಡುತ್ತಿವೆ. ಈ ರೀತಿಯ ಸುದ್ದಿಗಳು ಕಿರಿಕಿರಿಯುಂಟು ಮಾಡುತ್ತಿದ್ದು, ಸುದ್ದಿ ಕೇಳಿದರೆ ನನ್ನ ದೇಹದ ರಕ್ತ ಕುದಿಯುತ್ತದೆ. ಮಾಧ್ಯಮಗಳಿಗೆ ನಮ್ಮನ್ನು ಪ್ರಶ್ನಿಸುವ ಹಕ್ಕಿದೆ ಎಂದರೆ, ನಮಗೂ ಮಾಧ್ಯಮಗಳನ್ನು ಪ್ರಶ್ನಿಸುವ ಹಕ್ಕಿದೆ ಎಂದು ಕೆಸಿಆರ್ ಹೇಳಿದರು.

ಇದೇ ವೇಳೆ ತೆಲಂಗಾಣ ಹೋರಾಟದಲ್ಲಿ ಮೃತಪಟ್ಟ ಕುಟುಂಬಸ್ಥರ ಕುರಿತು ಮಾತನಾಡಿದ ಅವರು, ಮೃತ ಕುಟುಂಬಕ್ಕೆ ಪರಿಹಾರ ಧನವಾಗಿ ರು. 10 ಲಕ್ಷ ಹಾಗೂ ಕುಟುಂಬದ ಓರ್ವ ಸದಸ್ಯನಿಗೆ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದ್ದಾರೆ. ಕುಟುಂಬದ ಸದಸ್ಯರು ಯಾವ ವ್ಯಕ್ತಿಗೆ ಉದ್ಯೋಗ ನೀಡಬೇಕೆಂಬುದನ್ನು ಅವರೇ ನಿರ್ಧರಿಸಬೇಕು ಎಂದ ಕೆಸಿಆರ್ ಈ ಕುರಿತಂತೆ ಜಿಲ್ಲೆಗಳ ಮಂತ್ರಿಗಳು ಸಮೀಕ್ಷೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com