'ಪಿಕೆ' ಹೊಗಳಿ ವಿವಾದ ಕಟ್ಟಿಕೊಂಡ ಅಖಿಲೇಶ್..!

ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪಿಕೆ ಚಿತ್ರದ ಪೈರಸಿಯನ್ನು ನೋಡಿದರು ಎಂಬ ವಿಚಾರ ಅತಿ ಹೆಚ್ಚಾಗಿ ಸುದ್ದಿಗೆ ಗ್ರಾಸವಾಗುತ್ತಿದೆ.
ಪಿಕೆ ಚಿತ್ರದ ಪೋಸ್ಟರ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ (ಸಂಗ್ರಹ ಚಿತ್ರ)
ಪಿಕೆ ಚಿತ್ರದ ಪೋಸ್ಟರ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ (ಸಂಗ್ರಹ ಚಿತ್ರ)

ಲಖನೌ: ಆಮೀರ್ ಖಾನ್ ನಟನೆಯ ಬಹು ನಿರೀಕ್ಷಿತ ಚಿತ್ರ ಪಿಕೆ ಕುರಿತಂತೆ ಹೊಗಳಿಕೆಯ ಮಾತುಗಳನ್ನಾಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಇದೀಗ ವಿವಾದವೊಂದನ್ನು ಕಟ್ಟಿಕೊಂಡಿದ್ದಾರೆ.

ಪಿಕೆ ಚಿತ್ರದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವಿದ್ದು, ಇಂತಹ ಚಿತ್ರವನ್ನು ಎಲ್ಲರೂ ನೋಡಬೇಕು ಎಂದು ಹೇಳುವ ಮೂಲಕ ಪಿಕೆ ಚಿತ್ರದ ಬೆನ್ನಿಗೆ ನಿಂತಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಹೊಸ ವಿವಾದವೊಂದನ್ನು ಕಟ್ಟಿಕೊಂಡಿದ್ದಾರೆ.

ಪಿಕೆ ಚಿತ್ರದ ಕುರಿತಂತೆ ಕಳೆದ ಡಿಸೆಂಬರ್ 31ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಅಖಿಲೇಶ್ ಯಾದವ್ ಅವರು, 'ನನ್ನ ಕೆಲ ಸ್ನೇಹಿತರು ಪಿಕೆ ಚಿತ್ರವನ್ನು ನೋಡುವಂತೆ ನನಗೆ ಹೇಳುತ್ತಿದ್ದರು. ನಾನು ಇತ್ತೀಚೆಗಷ್ಟೇ ಪಿಕೆ ಚಿತ್ರವನ್ನು ಡೌನ್‌ಲೋಡ್ ಮಾಡಿದ್ದೆ. ಆದರೆ ನಿನ್ನೆ ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಿದೆ. ಚಿತ್ರ ನನಗೆ ತುಂಬಾ ಇಷ್ಟವಾಯಿತು. ಚಿತ್ರದಲ್ಲಿ ಸಾಮಾಜಿಕ ಕಳಕಳಿ ಇದೆ ಎಂದು ನನಗನ್ನಿಸಿತು' ಎಂದು ಹೇಳಿದ್ದರು. ಅಲ್ಲದೆ  ಪಿಕೆ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ್ದರು.

ಇದೇ ವಿಚಾರ ಎಲ್ಲಡೆ ಪ್ರಾಮುಖ್ಯತೆ ಪಡೆಯಿತೇ ಹೊರತು ಸುದ್ದಿಗೋಷ್ಠಿ ವೇಳೆ ಅಖಿಲೇಶ್ ನೀಡಿದ್ದ ಇತರೆ ಹೇಳಿಕೆಗಳು ಪ್ರಾಮುಖ್ಯತೆ ಪಡೆದಿರಲಿಲ್ಲ. ಆದರೆ ಸಮಾಜಿಕ ಜಾಲತಾಣಗಳಲ್ಲಿ ಅಖಿಲೇಶ್ ಯಾದವ್ ಅವರ ಮತ್ತೊಂದು ಹೇಳಿಕೆ ಹೆಚ್ಚಾಗಿ ಚರ್ಚೆಗೆ ಗ್ರಾಸವಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪಿಕೆ ಚಿತ್ರದ ಪೈರಸಿಯನ್ನು ನೋಡಿದರು ಎಂಬ ವಿಚಾರ ಅತಿ ಹೆಚ್ಚಾಗಿ ಸುದ್ದಿಗೆ ಗ್ರಾಸವಾಗುತ್ತಿದೆ.

ಪೈರಸಿಯನ್ನು ತಡೆಯಬೇಕಾದ ಸರ್ಕಾರವೇ ಪೈರಸಿಗೆ ಪ್ರಚೋದನೆ ನೀಡುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿದ್ದು, ಸ್ವತಃ ಮುಖ್ಯಮಂತ್ರಿಯಾಗಿರುವ ಅಖಿಲೇಶ್ ಯಾದವ್ ಅವರು ಪೈರಸಿಯನ್ನು ವೀಕ್ಷಿಸುವ ಮೂಲಕ ಇದೀಗ ವಿವಾದಕ್ಕೀಡಾಗಿದ್ದಾರೆ.

ಬಾಲಿವುಡ್ ನಟ ಆಮೀರ್ ಖಾನ್ ಅವರ ಬಹುನಿರೀಕ್ಷಿತ ಚಿತ್ರವಾಗಿರುವ ಪಿಕೆ ಚಿತ್ರ ತೆರೆಕಾಣುತ್ತಿದ್ದಂತೆಯೇ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಇದಲ್ಲದೆ ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಚಿತ್ರಮಂದಿರಗಳ ಮೇಲೆ ದಾಳಿ ಮಾಡುವ ಮೂಲಕ ಚಿತ್ರದ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡಿದ್ದವು. ಇದರ ಬೆನ್ನಲ್ಲೇ ಉತ್ತರಪ್ರದೇಶ ಸರ್ಕಾರದಿಂದ ಚಿತ್ರಕ್ಕೆ ಭಾರಿ ಮನ್ನಣೆ ದೊರೆತಿತ್ತು. ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಚಿತ್ರವನ್ನು ಹೊಗಳಿದ್ದೇ ಅಲ್ಲದೆ, ಚಿತ್ರಕ್ಕೆ ತೆರಿಗೆ ವಿನಾಯಿತಿ ಕೂಡ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com