
ಈಟನ್ ಅಲೈವ್ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪೌಲ್ ರಸೋಲಿ
ಬೆಂಗಳೂರು: 'ಈಟನ್ ಅಲೈವ್' ರಿಯಾಲಿಟಿ ಷೋ ಮೂಲಕ ಮನೆ ಮಾತಾದ ಪೌಲ್ ರಸೋಲಿ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವ ರಸೋಲಿ ತಮ್ಮ ಈಟನ್ ಅಲೈವ್ ಕಾರ್ಯಕ್ರಮದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಪೌಲ್ ಗೆ ನಮ್ಮ ಕನ್ನಡನಾಡಿನೊಂದಿಗೆ ನಂಟಿದ್ದು, ಅವರು ಕರ್ನಾಟಕದ ಅಳಿಯ. ದಕ್ಷಿಣ ಕನ್ನಡ ಜಿಲ್ಲೆಯ ಗೌರಿಯ ಕೈಹಿಡಿದ ಅವರು, ಅನಕೊಂಡದೊಂದಿಗಿನ ತಮ್ಮ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಹಾವಿನ ದೇಹದೊಳಕ್ಕೆ ಮನುಷ್ಯ ಹೋಗುತ್ತಾನೆ ಎಂಬ ಸುದ್ದಿಯೇ ಹುಬ್ಬೇರಿಸಿತ್ತು. ಖುದ್ಧು ಪೌಲ್ಗೂ ಅದು ರೋಮಾಂಚಕ ಅನುಭವವಾಗಿತ್ತು. 'ಆವತ್ತು ನಾನು ಅನಕೊಂಡದ ಬಾಯಿಯ ಬಳಿಗೆ ಹೋದಾಗ ಅದು ನನ್ನನ್ನು ನುಂಗುವ ಇಚ್ಛೆಯಲ್ಲಿರಲಿಲ್ಲ. ಅದು ನನ್ನಿಂದ ತಪ್ಪಿಸಿಕೊಳ್ಳಲು ಯತ್ನಿ,ತ್ತು. ಆವಾಗ ಅದಕ್ಕೆ ನನ್ನಿಂದ ತಪ್ಪಿಸಿಕೊಳ್ಳೋದು ಸಾಧ್ಯವಾಗಲಿಲ್ಲವೋ ಆಗ ಅದು ನನ್ನನ್ನು ಸುತ್ತಲಾರಂಭಿಸಿತು. ಸಂಪೂರ್ಣವಾಗಿ ನನ್ನನ್ನು ಆವರಿಸಿಕೊಂಡು ಬಿಡ್ತು. ಹಾವು ನನ್ನನ್ನು ಒತ್ತುತ್ತಿತ್ತು. ನನಗೆ ಯಾವುದೇ ನಿಯಂತ್ರಣ ಇರಲಿಲ್ಲ. ದೃಶ್ಯಗಳಲ್ಲೂ ಅದು ಕಂಡುಬರುತ್ತೆ'.
'ನನಗೆ ಈ ಸಾಹಸಕ್ಕೆ ಕೈ ಹಾಕುವಾಗ ನಿಜಕ್ಕೂ ನಾನು ಹಾವಿನೊಳಕ್ಕೆ ಹೋಗ್ತೇನೋ ಇಲ್ಲವೋ ಗೊತ್ತಿರಲಿಲ್ಲ. ಆದ್ರೆ ನಮ್ಮ ಉದ್ದೇಶ ಇದ್ದದ್ದು ಈ ಸ್ಟಂಟ್ ಮೂಲಕ ಜನರ ಗಮನ ಸೆಳೆಯುವುದು. ಜನರಿಗೆ ದೈತ್ಯ ಹಾವಿನ ಉಳಿವು ನಮ್ಮ ನೈಸರ್ಗಿಕ ಸಮತೋಲನಕ್ಕೆ ಅವಶ್ಯ ಅನ್ನೋದನ್ನು ತಿಳಿಸುವ ಪ್ರಯತ್ನ ಇದಾಗಿತ್ತಷ್ಟೇ. ಹುಲಿ ಹೇಗೆ ನಮ್ಮ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆಯೋ ಹಾಗೆಯೇ ದೈತ್ಯ ಹಾವುಗಳನ್ನು ಸಂರಕ್ಷಿಸುವುದರಿಂದ ಉರಗಗಳ ಸಂತತಿಯನ್ನು ಸಂರಕ್ಷಿಸಲು ಸಾಧ್ಯವಾಗುತ್ತೆ ಎನ್ನೋದು ಜನರಿಗೆ ಗೊತ್ತಾಗಬೇಕು.
ಅದಕ್ಕೆ ಜನರ ಗಮನ ಸೆಳೆಯಬೇಕಿತ್ತು. ಸಹಜವಾಗಿ ಜನರಿಗೆ ಉರಗಗಳ ಬಗ್ಗೆ ಮಾಹಿತಿ ಹೇಳ್ತಿವೀ ಅದರೆ ಯಾರೂ ಕೇಳೋದಿಲ್ಲ. ಆದ್ರೆ ಸ್ವಲ್ಪ ಹುಚ್ಚುತನ ಪ್ರದರ್ಶಿಸಿದರೆ, ಇವನಿಗೇನಾಗಿದೆ ಅಂತಾ ಕುತೂಹಲಕ್ಕಾಗಿಯಾದರೂ ನನ್ನತ್ತ ತಿರುಗಿ ನೋಡುತ್ತಾರೆ. ಆಗ ಜನರಿಗೆ ನಮ್ಮ ಉದ್ದೇಶ, ಜಾಗೃತಿ ಮೂಡಿಸೋದು ಸುಲಭವಾಗುತ್ತೆ ಎನ್ನೋದೆ ನಮ್ಮ ಪ್ಲಾನ್ ಆಗಿತ್ತು' ಎಂದು ರಸೋಲಿ ಹೇಳಿದ್ದಾರೆ.
ಪತ್ನಿ ಗೌರಿಗೆ ಭಯವಿರಲಿಲ್ಲವಂತೆ
ಪೌಲ್ ರಸೋಲಿಯ ಪತ್ನಿ, ಕರ್ನಾಟಕದ ಗೌರಿಗೆ ಈ ವಿಚಾರದಲ್ಲಿ ಭಯವೇ ಆಗಲಿಲ್ಲವಂತೆ. 'ಆ ಅನುಭವ ವಿಚಿತ್ರವಾಗಿತ್ತು. ಅಷ್ಟೇ ರೋಮಾಂಚಕವಾಗಿತ್ತು. ನನಗೆ ಗೊತ್ತು ಪೌಲ್ಗೆ ಹಾವಿನ ಬಗ್ಗೆ ಚೆನ್ನಾಗಿ ಗೊತ್ತು. ಅವನು ಓದಿಕೊಂಡಿದ್ದಾನೆ. ಅನುಭವಿ. ಹಾಗಾಗಿ ನನಗೆ ಹೇಗಿರುತ್ತೆ ಎನ್ನೋ ಕುತುಹಲವಿತ್ತು. ಬಿಟ್ರೆ ಭಯವಂತೂ ಇರಲಿಲ್ಲ' ಎಂದು ಹೇಳುತ್ತಾರೆ ಗೌರಿ.
ಸ್ಪಷ್ಟನೆ ನೀಡಿದ ರಸೋಲಿ
ಹೆಚ್ಚು ಅಂದ್ರೆ ಒಂದು ಗಂಟೆಕಾಲ ನಾನು ಹಾವಿನ ಸೆರೆಯಲ್ಲಿದ್ದೆ. ಆದ್ರೆ ಹಾವಿನೊಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. 28 ದಿನಗಳಿದ್ದೆ, 24 ಗಂಟೆ ಇದ್ದೆ ಅನ್ನೋದೆಲ್ಲ ಸುಳ್ಳು. ನಾನು ಆ ಹಾವಿನ ಬಾಯಿಯೊಳಕ್ಕೆ ಪ್ರವೇಶಿಸುವ ಪ್ರಯತ್ನ ಪಟ್ಟೆ. ಅಷ್ಟರಲ್ಲಾಗಲೇ ಹಾವು ನನ್ನನ್ನು ಆವರಿಸಿತ್ತು. ನನ್ನನ್ನು ಹಿಂಡಲಾರಂಭಿಸಿತ್ತು. ಹೀಗಾಗಿ ಅಲ್ಲಿಗೆ ಕಾರ್ಯ ಮುಕ್ತಾಯವಾಯ್ತು. ಆದ್ರೆ ನಮ್ಮ ಉದ್ದೇಶ ಈಡೇರಿತ್ತು. ಅದು ಜಗತ್ತನ್ನು ಎಚ್ಚರಿಸಿದೆ, ಆಕರ್ಷಿಸಿದೆ. ನಾವು ಹೇಳಲು ಬಯಸಿದ್ದನ್ನು ಕೇಳುವ ಕಿವಿಗಳು ಸಿಕ್ಕಿವೆ ಅಂತಾರೆ ಪೌಲ್.
ಪೌಲ್-ಗೌರಿ ಲವ್ ಸ್ಟೋರಿ
2008ರಲ್ಲಿ ಬೆಂಗಳೂರಿನಲ್ಲಿ ಮ್ಯೂಸಿಕ್ ಫೆಸ್ಟಿವಲ್ ನಡೆಯುತ್ತಿದ್ದ ಸಮಯ. ಅಲ್ಲೊಂದು ಹಾವು ಕಾಣಿಸಿತ್ತು. ಆ ಸಮಯದಲ್ಲಿ ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದ ಪೌಲ್ ಹಾವುಕಂಡು ಬಂದಲ್ಲಿ ಜನ ಅದನ್ನು ಕೊಂದು ಬಿಡ್ತಾರೆ ಎಂಬ ಕಾರಣದಿಂದಾಗಿ ತಾನೇ ಹೋಗಿ ಹಿಡಿಯುತ್ತಿದ್ರು.
ಹೀಗೆ ಹಾವನ್ನು ರಕ್ಷಿಸಲು ಹೋದ ಸಂದರ್ಭದಲ್ಲೇ ಅವರು ಎದುರಾಗಿದ್ದು. ಆ ಹಾವನ್ನು ನಾನು ಹಿಡಿಯುತ್ತೇನೆ, ನನಗೆ ನಾಗರಹಾವು ಹಿಡಿಯೋದು ಗೊತ್ತು ಅಂತ ಗೌರಿ ಹೇಳಿದ್ರೆ, ನನಗೆ ಅನಕೊಂಡದ ಜೊತೆ ಕೆಲಸ ಮಾಡಿ ಗೊತ್ತು ನಾನು ಹಿಡಿಯುತ್ತೇನೆ ಅಂದ್ರಂತೆ ಪೌಲ್. ಹೀಗೆ ಹಾವು ಹಿಡಿಯುವ ವಿಚಾರದಲ್ಲಿ ಆರಂಭವಾದ ವಾಗ್ವಾದ ಇವರಿಗೇ ಗೊತ್ತಿರದೆ ಪ್ರೇಮಕ್ಕೆ ತಿರುಗಿತು. ಅಮೆಜಾನ್ ಬಗ್ಗೆ, ಅನಕೊಂಡದ ಬಗ್ಗೆ ಪೌಲ್ ಅವರಿಂದ ತಿಳಿದುಕೊಂಡ ಗೌರಿಗೆ ಪೌಲ್ಗಿದ್ದ ಕಾಡಿನ ಪ್ರೀತಿ, ಪ್ರಾಣಿಗಳ ಪ್ರೀತಿ, ಅವರ ಮೇಲೂ ಪ್ರೀತಿ ಅಂಕುರಿಸಲು ಕಾರಣವಾಯಿತಂತೆ. ಒಟ್ಟಿಗೆ ಅಮೆಜಾನ್ ಕಾಡಲ್ಲಿ ಕೆಲಸ ಮಾಡಿದ ಅನುಭವ ಈ ಜೋಡಿಯ ಪ್ರೀತಿಯನ್ನು ಹೆಚ್ಚಿಸಿದೆ.
ಅಮೆಜಾನ್ ಕಾಡಿನಲ್ಲಿ ಸುತ್ತಾಡಿದ ದಂಪತಿ
ಗೌರಿ ಮತ್ತು ಪೌಲ್ ಒಟ್ಟಾಗಿ ಅಮೆಜಾನ್ ಕಾಡುಗಳಲ್ಲಿ ಸುತ್ತಾಡಿದ್ದಾರೆ. ಅಧ್ಯಯನ ನಡೆಸಿದ್ದಾರೆ. ಅದ್ರಲ್ಲೂ ಅಮೆಜಾನ್ ಕಾಡಿನಲ್ಲಿ 19 ಅಡಿ ಉದ್ಧದ ಬೃಹತ್ ಅನಕೊಂಡವನ್ನು ಹಿಡಿದದ್ದು ಅವಿಸ್ಮರಣೀಯ ಕ್ಷಣಗಳು ಎಂದು ಪತ್ನಿ ಗೌರಿ ಹೇಳುತ್ತಾರೆ. ನೀರಿನಲ್ಲಿ ಇಳಿದು ಅನಕೊಂಡ ಹಾವನ್ನು ಹಿಡಿದ ಆ ಕ್ಷಣ ನೆನೆದು ಖುಷಿ ಪಡುತ್ತಾರೆ ಈ ದಂಪತಿ. ಕಾಡು ನಾಡಿಗಿಂತ ಸೇಫ್ ಅಂತಾರೆ ಪೌಲ್. ಕಾಡಲ್ಲಿ ಜನರ ಕಾಟವಿಲ್ಲ. ಟ್ರಾಫಿಕ್ ಕಿರಿಕಿರಿ ಇಲ್ಲ. ಅಪಘಾತಗಳ ಭಯವಿಲ್ಲ. ಕಾಡಿನ ಜೀವನ ಖುಷಿ ಕೊಡುತ್ತೆ ಎನ್ನೋದು ಈ ಹಾವಾಡಿಗನ ಅಭಿಪ್ರಾಯ.
'ಮದರ್ ಆಫ್ ಗಾಡ್' ಎನ್ನುವ ಪುಸ್ತಕ ಬರೆದಿರುವ ಪೌಲ್ ತನ್ನ 10 ವರ್ಷಗಳ ಕಾಡಿನ ಹಾದಿಯನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಭಾರತದ ಬಗ್ಗೆ ಅಪಾರ ಪ್ರೀತಿ ಅಭಿಮಾನ ಇದೆ. ನಾನು ವಿದೇಶಿಗನಲ್ಲ. ನನಗೆ ಭಾರತ ನನ್ನ ತವರಿನಷ್ಟೇ ಆಪ್ತ. ಅದರಲ್ಲೂ ದಕ್ಷಿಣ ಭಾರತದಲ್ಲಿ ನನ್ನ ಅನುಭವ ಬಹಳ ಸೊಗಸಾಗಿದೆ. ನನಗೆ ಬೆಂಗಳೂರು ಪಶ್ಚಿಮಘಟ್ಟದ ಕಾಡುಗಳು ಅಮೆಜಾನ್ನಷ್ಟೇ ಆಪ್ತ ಅಂತಾರೆ ಪೌಲ್.
ಈ ದಂಪತಿಯ ಆಸಕ್ತಿ. ಕಾಡಿನ ಪ್ರೀತಿಯೇ ಇವರನ್ನು ಇನ್ನಷ್ಟು ಹತ್ತಿರವಾಗಿಸಿದ್ದು ಮತ್ತು ಎತ್ತರೆತ್ತರಕ್ಕೆ ಕರೆದುಕೊಂಡು ಹೋಗ್ತಿರೋದು. ವನ್ಯ ಜೀವಿಗಳಿಗೆ ಧ್ವನಿಯಿಲ್ಲ. ಅವರ ಬೇಡಿಕೆಗಳನ್ನು ಅವು ಹಂಚಿಕೊಳ್ಳಲು ಸಾಧ್ಯವಿಲ್ಲ. ನಾವು ಮನುಷ್ಯರಾಗಿ ಆ ಪ್ರಾಣಿಗಳ ನೋವನ್ನು ಅರಿಯಬೇಕು, ಇವುಗಳ ಧ್ವನಿಯಾಗಬೇಕು, ಆ ಮೂಲಕ ಪರಿಸರವನ್ನು ಕಾಪಾಡುವ ಜವಾಬ್ದಾರಿ ಅರಿಯಬೇಕು ಎನ್ನೋ ಕಾಳಜಿ ಪೌಲ್ ಅವರದ್ದು. ಅವರು ನಮ್ಮ ರಾಜ್ಯದ ಅಳಿಯ ಎಂಬ ಹೆಮ್ಮೆ ನಮ್ಮದು.
Advertisement