
ಹೈದ್ರಾಬಾದ್/ವಾಷಿಂಗ್ಟನ್: ಮದ್ಯಪಾನವನ್ನು ವಿರೋಧಿಸಿದ್ದ ಮಹಾತ್ಮ ಗಾಂಧಿಯ ಚಿತ್ರವನ್ನು ಅಮೆರಿಕದ ಕಂಪನಿಯೊಂದು ಬಿಯರ್ ಬಾಟಲಿಗಳಲ್ಲಿ ಹಾಕುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಕಂಪನಿಯ ಈ ಕ್ರಮವು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂದು ಆರೋಪಿಸಿ ವಕೀಲರೊಬ್ಬರು ಹೈದ್ರಾಬಾದ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಕಂಪನಿಯು ಕ್ಷಮೆಯಾಚಿಸಿದೆ.
ಕನೆಕ್ಟಿಕಟ್ ಮೂಲದ ನ್ಯೂ ಇಂಗ್ಲೆಂಡ್ ಬ್ರೀವಿಂಗ್ ಕಂಪನಿ ತನ್ನ ಬಿಯರ್ ಬ್ರ್ಯಾಂಡ್‌ಗೆ ಗಾಂಧಿ ಬಾಟ್ ಎಂದು ಹೆಸರಿಟ್ಟಿದ್ದಷ್ಟೇ ಅಲ್ಲದೇ, ಅದರಲ್ಲಿ ಗಾಂಧೀಜಿಯ ಚಿತ್ರವನ್ನು ಅಂಟಿಸಿತ್ತು. ಇದನ್ನು ವಿರೋಧಿಸಿ ವಕೀಲರೊಬ್ಬರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಕಂಪನಿಯ ಈ ಕ್ರಮವು ಖಂಡನೀಯವಾಗಿದ್ದು, ಭಾರತೀಯ ಕಾನೂನು ಪ್ರಕಾರ ಇದು ಶಿಕ್ಷಾರ್ಹ ಅಪರಾಧ ಎಂದಿದ್ದರು.
ಸೋಮವಾರ ಅರ್ಜಿಯ ವಿಚಾರಣೆ ನಡೆಯಲಿದೆ. ಇದೇ ವೇಳೆ, ತನ್ನ ಕ್ರಮದ ಬಗ್ಗೆ ಕ್ಷಮೆಯಾಚಿಸಿರುವ ಕಂಪನಿ, ಗಾಂಧೀಜಿಗೆ ಅವಮಾನ ಮಾಡುವ ಉದ್ದೇಶವಿರಲಿಲ್ಲ. ಶಾಂತಿದೂತನಿಗೆ ಶ್ರದ್ಧಾಂಜಲಿ ಸಲ್ಲಿಸಲೆಂದು ಹೀಗೆ ಮಾಡಿದೆವು. ಇದನ್ನು ಗಾಂಧಿಯ ಮೊಮ್ಮಗಳು ಮತ್ತು ಮೊಮ್ಮಗ ಕೂಡ ಒಪ್ಪಿದ್ದರು ಎಂದು ತಿಳಿಸಿದೆ.
Advertisement