
ಚಂಡಿಗಡ: ಕಿರುಕುಳ ಮತ್ತು ಬೆದರಿಕೆಯಿಂದ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದ ಶಾಲಾ ಬಾಲಕಿಯೋರ್ವಳನ್ನು ಸಮಯಪ್ರಜ್ಞೆ ಮೆರೆದ ಪೊಲೀಸರು ರಕ್ಷಿಸಿದ್ದಾರೆ.
ಹರ್ಯಾಣದ ಯಮುನಾನಗರ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ರೈಲ್ವೇ ಹಳಿ ಮೇಲೆ ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯನ್ನು ಆಕೆಯ ಸ್ನೇಹಿತೆಯರು ಮನವೊಲಿಸಲು ಯತ್ನಿಸುತ್ತಿದ್ದರು. ಈ ವೇಳೆ ಬಾಲಕಿಯರ ನಡವಳಿಕೆಯನ್ನು ಕಂಡ ರೈಲ್ವೇ ಪೊಲೀಸರು ಅನುಮಾನಗೊಂಡು ವಿದ್ಯಾರ್ಥಿನಿಯರನ್ನು ವಿಚಾರಿಸಿದ್ದಾರೆ. ಆಗ ನೊಂದ ಬಾಲಕಿ ಎಂಎಂಎಸ್ ಬೆದರಿಕೆ ವಿಚಾರವನ್ನು ಬಹಿರಂಗಗೊಳಿಸಿದ್ದಾಳೆ.
ಕೆಲ ದುಷ್ಕರ್ಮಿಗಳು ಬಾಲಕಿಗೆ ಕಿರುಕುಳ ನೀಡಿದ್ದಷ್ಟೇ ಅಲ್ಲದೇ ಆಕೆಯ ಕೆಲ ರಹಸ್ಯ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದರು. ಅಲ್ಲದೆ ಅದನ್ನು ಎಂಎಂಎಸ್ ಮೂಲಕ ಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಇದರಿಂದ ತೀವ್ರ ಭೀತಿಗೊಳಗಾಗಿದ್ದ ಬಾಲಕಿ ಯಮುನಾನಗರದ ರೈಲ್ವೇ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದಳು. ಈ ವಿಚಾರ ತಿಳಿದ ಆಕೆಯ ಕೆಲ ಸಹಪಾಠಿಗಳು ಆಕೆಯ ಮನವೋಲಿಸುವ ಕಾರ್ಯಕ್ಕೆ ಮುಂದಾಗಿದ್ದರು. ರೈಲ್ವೇ ಹಳಿ ಮೇಲೆ ನಡೆಯುತ್ತಿದ್ದ ಘಟನೆಯನ್ನು ಕಂಡ ಸ್ಥಳೀಯ ಪೊಲೀಸರು ಅನುಮಾನಗೊಂಡು ಬಾಲಕಿಯರನ್ನು ವಿಚಾರಿಸಿ ಬಳಿಕ ಬಾಲಕಿಯ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಬಾಲಕಿಯ ಪೋಷಕರಿಗೆ ಕರೆ ಮಾಡಿ ಠಾಣೆಗೆ ಕರೆಸಿಕೊಂಡು ಬಾಲಕಿಯನ್ನು ಅವರ ವಶಕ್ಕೆ ನೀಡಿದ್ದಾರೆ.
ಪ್ರಸ್ತುತ ಬಾಲಕಿಗೆ ಕಿರುಕುಳ ನೀಡಿದ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Advertisement