
ನವದೆಹಲಿ: ತೆರಿಗೆ ವಂಚಕರಿಗೆ ಕಂಟಕವಾಗಬೇಕಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚಿತರಿಂದ ಲಂಚ ಪಡೆದಿರುವ ಹಗರಣವೊಂದನ್ನು ಸಿಬಿಐ ಬಯಲಿಗೆಳೆದಿದ್ದು, ಈ ಸಂಬಂಧ ಆದಾಯ ತೆರಿಗೆ ಅಧಿಕಾರಿ ಸೇರಿದಂತೆ ಹಲವರನ್ನು ಬಂಧಿಸಿದೆ.
ತೆರಿಗೆ ವಂಚಿತ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆಯ ತನಿಖೆ ವಿಭಾಗದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಪ್ರಕರಣ ಇತ್ಯಾರ್ಥಗೊಳಿಸುವ ಸಲುವಾಗಿ ಚಾರ್ಟೆಡ್ ಅಕೌಂಟೆಂಟ್ ಹಾಗೂ ಉದ್ಯಮಿಗಳೊಂದಿಗೆ ಜೊತೆ ಸೇರಿ ಭಾರಿ ಲಂಚ ಪಡೆದಿರುವ ಆರೋಪದ ಮೇಲೆ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಸಿಬಿಐ ವಕ್ತಾರ ಕಾಂಚನ್ ಪ್ರಸಾದ್ ಹೇಳಿದ್ದಾರೆ.
ಸಿಬಿಐ ಅಧಿಕಾರಿಗಳು ಕಳೆದ ಶನಿವಾರ ಮುಂಬೈ ಮತ್ತು ಚೆನ್ನೈನಾದ್ಯಂತ ಕಾರ್ಯಾಚರಣೆ ಕೈಗೊಂಡಿದ್ದರು. ಈ ಸಂಬಂಧ ಚೆನ್ನೈನ ಆದಾಯ ತೆರಿಗೆಯ ಜಂಟಿ ಆಯುಕ್ತರಾದ ಸಲೊಂಗ್ ಯಾದೆನ್, ಇಬ್ಬರು ಚಾರ್ಟೆಡ್ ಅಕೌಂಟೆಂಟ್‌ಗಳಾದ ಸಂಜಯ್ ಬಂಡಾರಿ ಮತ್ತು ಶ್ರೇಯಸ್ ಬಂಡಾರಿ, ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಆರ್.ಜಿ ಹಿತೇಶ್ ಕವಾದ್ ಮಧ್ಯವರ್ತಿಗಳು ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿತರ ಸಂಸ್ಥೆಗಳ ಹಲವರನ್ನು ಬಂಧಿಸಲಾಗಿದೆ ಎಂದರು.
ಪ್ರಕರಣ ಸಂಬಂಧ ಬಂಧಿಸಿರುವ ಅಧಿಕಾರಿಗಳ ವಿಚಾರಣೆ ಸಿಬಿಐ ಅಧಿಕಾರಿಗಳು ನಡೆಸುತ್ತಿದ್ದು, ಮುಂಬೈ ಹಾಗೂ ಚೆನ್ನೈನ ಹಿರಿಯ ಆದಾಯ ತೆರಿಗೆ ಅಧಿಕಾರಿಗಳ ಮೇಲೆ ನಿಗಾ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement