
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಫೆಬ್ರವರಿ 7 ರಂದು ಮತದಾನ ನಡೆಯಲಿದೆ.
ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಮುಖ್ಯ ಚುನಾವಣಾಧಿಕಾರಿ ವಿಎಸ್ ಸಂಪತ್ ಅವರು, ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಸಿದರು. ಜನವರಿ 14ರಂದು ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ ಫೆಬ್ರವರಿ 7ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆ ಮಾಡಲು ಜನವರಿ 21 ಕೊನೆಯ ದಿನವಾಗಿದ್ದು, ಜನವರಿ 22ರಂದು ನಾಮಪತ್ರಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ. ನಾಮಪತ್ರ ಹಿಂತೆಗೆದುಕೊಳ್ಳಲು ಜನವರಿ 24 ಕೊನೆಯ ದಿನವಾಗಿದೆ.
ಫೆಬ್ರವರಿ 7ರಂದು ಒಂದೇ ಹಂತದಲ್ಲಿ ಎಲ್ಲ 70 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 10ರಂದು ಫಲಿತಾಂಶ ಪ್ರಕಟವಾಗಲಿದೆ. ಇಂದಿನಿಂದಲೇ ದೆಹಲಿಯಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ ಎಂದು ವಿಎಸ್ ಸಂಪತ್ ಹೇಳಿದರು.
ಒಟ್ಟು 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ ಸುಮಾರು 1.30 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಜಕೀಯ ಅಸ್ತಿರತೆಯಿಂದಾಗಿ ದೆಹಲಿಯಲ್ಲಿ ಹೇರಲಾಗಿರುವ ರಾಷ್ಟ್ರಪತಿ ಆಡಳಿತ ಫೆಬ್ರವರಿ 15ರಂದು ಕೊನೆಗೊಳ್ಳಲ್ಲಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
Advertisement