ಸಚಿವ ಅಂಬರೀಷ್
ಸಚಿವ ಅಂಬರೀಷ್

ರೇಸ್ ಕೋರ್ಸ್ ಸ್ಥಳಾಂತರ: ಅಂಬಿ ಸಡ್ಡು

ರೇಸ್ ಕೋರ್ಸ್ ಸ್ಥಳಾಂತರ ವಿಚಾರದಲ್ಲಿ ರಾಜ್ಯ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಕ್ಕೆ...
Published on

ಬೆಂಗಳೂರು: ರೇಸ್ ಕೋರ್ಸ್ ಸ್ಥಳಾಂತರ ವಿಚಾರದಲ್ಲಿ ರಾಜ್ಯ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಕ್ಕೆ ಸಚಿವ ಅಂಬರೀಷ್ ಪರೋಕ್ಷವಾಗಿ ಸಡ್ಡು ಹೊಡೆದಿದ್ದಾರೆ.

ತಮ್ಮ ನಿವಾಸದಲ್ಲಿ ಮಂಡ್ಯ ನಗರಸಭೆ ಸದಸ್ಯರು ಮತ್ತು ಅಭಿಮಾನಿಗಳ ಜತೆ ಬುಧವಾರ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಪ್ರಧಾನಿ ನಿವಾಸದ ಎದುರೇ ಇರುವ ರೇಸ್‌ಕೋರ್ಸ್ ಅನ್ನು ಸ್ಥಳಾಂತರ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ರೇಸ್‌ಕೋರ್ಸ್ ಸ್ಥಳಾಂತರ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಅದು ಇತ್ಯರ್ಥವಾಗಲಿ. ರಾಜ್ಯದಲ್ಲಿ ಈ ರೇಸ್‌ಕೋರ್ಸ್ ಸ್ಥಳಾಂತರ ಮಾಡಬೇಕಾದ ಅಗತ್ಯವಿಲ್ಲ ಎಂದರು.

ಮಂಡ್ಯ ಸಮಸ್ಯೆ 21ಕ್ಕೆ ಸಭೆ

ಮಂಡ್ಯ ನಗರಸಭೆ ಅಧ್ಯಕ್ಷರ ಬದಲಾವಣೆ ಸಂಬಂಧ ಸದಸ್ಯರ ಜತೆ ಸುದೀರ್ಘ ಚರ್ಚೆ ನಡೆಸಿದ ಅವರು, ಜನವರಿ 21ಕ್ಕೆ ನಾನು ಮಂಡ್ಯಕ್ಕೆ ಬರುತ್ತೇನೆ. ಅಂದು ಸಭೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸೋಣ ಎಂದು ಹೇಳಿದ್ದಾರೆ.

ಮಂಡ್ಯ ನಗರಸಭೆಗೆ ಪಕ್ಷೇತರ ಅಭ್ಯರ್ಥಿ ಸಿದ್ದರಾಜು ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಅವರು 15 ತಿಂಗಳ ನಂತರ ಅಧಿಕಾರ ಬಿಟ್ಟುಕೊಡುವ ಒಪ್ಪಂದವಾಗಿತ್ತು. ಆದರೆ ಈಗ ಸಿದ್ದರಾಜು ಕಾಂಗ್ರೆಸ್ ಸದಸ್ಯರ ಜತೆಯೇ ಮಲೇಷ್ಯಾಕ್ಕೆ ತೆರಳಿದ್ದಾರೆ.

ಇದು ಅಂಬರೀಶ್ ಬಣದ ಅಮರಾವತಿ ಚಂದ್ರಶೇಖರ್ ಸೇರಿದಂತೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಂಬರೀಶ್ ಜತೆ ಸಭೆ ನಡೆಸಿದ ಬೆಂಬಲಿಗರು, ಅವಿಶ್ವಾಸ ನಿರ್ಣಯ ಮಂಡಿಸಿಯಾದರೂ ಸಿದ್ದರಾಜು ಪದಚ್ಯುತಿಗೆ ನಿರ್ಧರಿಸಿದ್ದಾರೆ. ಇದಕ್ಕೆ ಅಂಬರೀಶ್ ಪರೋಕ್ಷ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಹೈಕಮಾಂಡ್ ಒಪ್ಪಿದರೆ ದಲಿತರು ಸಿಎಂ ಆಗೋಕೆ ಅಭ್ಯಂತರವಿಲ್ಲ

ಹೈಕಮಾಂಡ್ ಒಪ್ಪಿದರೆ ದಲಿತರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಸಚಿವ ಅಂಬರೀಷ್ ಹೇಳಿದ್ದಾರೆ. ಆ ಮೂಲಕ ದಲಿತರು ಮುಖ್ಯಮಂತ್ರಿ ಆಗಬೇಕೆಂಬ ವಾದವನ್ನು ಅವರು ಮತ್ತೆ ಜೀವಂತವಾಗಿಡಲು ಯತ್ನಿಸಿದ್ದಾರೆ. 'ನಮ್ಮದು ಹೈಕಮಾಂಡ್ ಸಂಸ್ಕೃತಿ. ದಲಿತರು ಮುಖ್ಯಮಂತ್ರಿಯಾಗಲಿ ಎಂದು ಹೈಕಮಾಂಡ್ ಒಪ್ಪಿಗೆ ನೀಡಿದರೆ ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.




Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com