
ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಗಣ ರಾಜ್ಯೋತ್ಸವ ಅತಿಥಿಯಾಗಿ ಆಗಮಿಸುತ್ತಿರುವ ಉದ್ದೇಶ ಕೇವಲ ಎರಡು ದೇಶಗಳ ನಡುವಿನ ಬಾಂಧವ್ಯ ವೃದ್ಧಿಗಷ್ಟೆ ಸೀಮಿತವೇ? ಖಂಡಿತಾ ಇಲ್ಲ.
ಏಷ್ಯಾದಲ್ಲಿ ಬದಲಾದ ಪರಿಸ್ಥಿತಿ, ಭಾರತದಲ್ಲಿ ಬದಲಾದ ರಾಜನೀತಿಯನ್ನು ಮನಗಂಡೇ ಒಬಾಮ ನವದೆಹಲಿಗೆ ಭೇಟಿಕೊಡಲು ಮುಂದಾಗಿದ್ದಾರೆ.
2028ರಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವ, ವಿಶ್ವದ ಅತಿದೊಡ್ಡ ಸೇನಾ ಖರೀದಿದಾರ ಹಾಗೂ 3ನೇ ಅತಿದೊಡ್ಡ ಸೇನೆಯನ್ನು ಹೊಂದಿರುವ ಭಾರತ ಬಿಟ್ಟರೆ ಬೇರಿನ್ಯಾವ ದೇಶವೂ ಏಷ್ಯಾದಲ್ಲಿ ಚೀನಾಗೆ ಸೆಡ್ಡು ಹೊಡೆಯುವ ಸಾಮರ್ಥ್ಯ ಹೊಂದಿಲ್ಲ.
ಚೀನಾದ ಹೆಡೆಮುರಿ ಕಟ್ಟಬೇಕಾದರೆ ಭಾರತವೇ ಸರಿ. ಇದರ ಜತೆಗೆ, ಬೇಡಿಕೆ ಕಳೆದುಕೊಳ್ಳುತ್ತಿರುವ ಅಮೆರಿಕದ ಕೈಗಾರಿಕಾ ಕ್ಷೇತ್ರಕ್ಕೆ ಹೊಸ ಮಾರುಕಟ್ಟೆ ಆಗಬಲ್ಲ ಸಾಮರ್ಥ್ಯವೂ ಹೊಂದಿದೆ.
ಮೇಕ್ ಇನ್ ಇಂಡಿಯಾ ಭಾರತದ ಅರ್ಥ ವ್ಯವಸ್ಥೆಯನ್ನಷ್ಟೇ ಎತ್ತರಿಸುವುದಿಲ್ಲ. ರಫ್ತು ಆಧರಿತ ಚೀನಾದ ಮಾರುಕಟ್ಟೆಯನ್ನು ನಡುಗಿಸಲಿದೆ ಎನ್ನುವುದು ಅಮೆರಿಕಕ್ಕೂ ಅರಿವಿದೆ. ಇದನ್ನೆಲ್ಲ ಮನಗಂಡೇ ಒಬಾಮ ಜ.26ರಂದು ಭಾರತಕ್ಕೆ ಆಗಮಿಸುತ್ತಿರುವುದು. ಇದರ ಜತೆಗೆ, ಭಾರತದಲ್ಲಿ ತನ್ನ ಹಳೆಯ ವೈರಿ ರಷ್ಯಾದ ಪ್ರಾಬಲ್ಯ ಮುರಿಯುವ, ಈ ಮೂಲಕ ರಷ್ಯಾವನ್ನು ಮೂಲೆಗುಂಪು ಮಾಡುವ ದೂರಾಲೋಚನೆಯೂ ಅಮೆರಿಕಕ್ಕಿದೆ.
ಪ್ರತಿಯೊಂದಕ್ಕೂ ಚೀನಾ ಅಡ್ಡಗಾಲು
ಚೀನಾವು ಭಾರತದ ನೆರೆಯ ದೇಶ, ಹೂಡಿಕೆದಾರ, ಬಹುದೊಡ್ಡ ರಫ್ತುದಾರ ಎನ್ನುವುದೆಲ್ಲ ನಿಜ. ಆದರೆ, ಇದೆಲ್ಲಕ್ಕಿಂತ ಮಿಗಿಲಾಗಿ ಭಾರತದ ಅಭಿವೃದ್ದಿಗೆ ಒಳಗೊಳಗೆ ಕರುಬುತ್ತಿರುವ, ಭಾರತವನ್ನು ಹೇಗಾದರೂ ಮಾಡಿ ಹಣಿಯಬೇಕು ಎಂದು ತಂತ್ರ ರೂಪಿಸುತ್ತಿರುವ ಶತ್ರು. ಅರುಣಾಚಲ ವಿಚಾರದಲ್ಲಿ ಪದೇ ಪದೆ ತಕರಾರು ತೆಗೆಯುವ ಚೀನಾ, ಭಾರತದ ವಿರುದ್ಧ ಪಾಕ್ ಅನ್ನು ಎತ್ತಿಕಟ್ಟುತ್ತಿದೆ. ಭಾರತದ ವಿರೋಧದ ನಡುವೆಯೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಸ್ತೆ ನಿರ್ಮಾಣ ಕೈಗೆತ್ತಿಕೊಂಡಿದೆ. ಈ ಮೂಲಕ ಭಾರತದ ತಾಳ್ಮೆ ಪರೀಕ್ಷಿಸುತ್ತಿದೆ.
ಒಬಾಮ ಭೇಟಿಗೂ ಚೀನಾಗೂ ಏನು ಸಂಬಂಧ?
Advertisement