ಹೆಚ್ಚೆಚ್ಚು ಮಕ್ಕಳನ್ನು ಹೆರಿ: ಆಂಧ್ರ ಸಿಎಂ ನಾಯ್ಡು

ಜಪಾನ್ ದೇಶದಂತೆ ಆಂಧ್ರಪ್ರದೇಶವಾಗದಿರಲು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಎಂದು ಮುಖ್ಯಮಂತ್ರಿ ಚಂದ್ರಬಾಬು..
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (ಸಂಗ್ರಹ ಚಿತ್ರ)
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (ಸಂಗ್ರಹ ಚಿತ್ರ)

ಹೈದರಾಬಾದ್: ಜಪಾನ್ ದೇಶದಂತೆ ಆಂಧ್ರಪ್ರದೇಶವಾಗದಿರಲು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಇಂದು ನಡೆದ 'ಆದರ್ಶ ಗ್ರಾಮ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ಜಪಾನ್ ದೇಶದಲ್ಲಿ ಯುವಕರಿಗಿಂತ ಮುದುಕರ ಪ್ರಮಾಣವೇ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿಯೂ ಪ್ರಸ್ತುತ ಇದೇ ಪರಿಸ್ಥಿತಿ ಇದ್ದು, ಇದರ ನಿವಾರಣೆಗೆ ದಂಪತಿಗಳು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು. ಇದರಿಂದ ಭವಿಷ್ಯದಲ್ಲಿ ಯುವಕರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಚಂದ್ರಬಾಬು ನಾಯ್ಡು ಅವರು ಅಭಿಪ್ರಾಯಪಟ್ಟಿದ್ದಾರೆ.

'ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಆಂಧ್ರಪ್ರದೇಶದಲ್ಲಿನ ಯುವಜನತೆಯ ಅನುಪಾತ ಕಡಿಮೆ ಇದ್ದು, ಯುವಕರು ಬೇಗ ಮದುವೆಯಾಗುತ್ತಿಲ್ಲ. ಅವರು ಬೇಗ ಜವಾಬ್ದಾರಿಗಳನ್ನು ಹೊರಲು ಇಚ್ಛಿಸುತ್ತಿಲ್ಲ. ಹೀಗಾಗಿ ಮದುವೆಯಾದರೂ ಬೇಗ ಮಕ್ಕಳು ಪಡೆಯುವುದಕ್ಕೆ ಇಷ್ಟಪಡುವುದಿಲ್ಲ' ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದರು.

ಇತ್ತೀಚೆಗಿನ ಸಂಶೋಧನಾ ವರದಿಗಳ ಪ್ರಕಾರ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಆಂಧ್ರಪ್ರದೇಶದಲ್ಲಿ ಯುವ ಜನತೆಯ ಅನುಪಾತ ಕಡಿಮೆಯಾಗಿದ್ದು, ಶಿಶುಮರಣ, ಬಾಣಂತಿ ಮರಣ ಪ್ರಮಾಣ ಮತ್ತು ಮಹಿಳಾ ಶಿಕ್ಷಣ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ ಎಂದು ತಿಳಿದುಬಂದಿದೆ. ಶೇ.50ಕ್ಕೂ ಹೆಚ್ಚು ಪ್ರಮಾಣದ ಮಹಿಳೆಯರು 15 ವರ್ಷಕ್ಕಿಂತಲೂ ಮೊದಲೇ ಮದುವೆಯಾಗುತ್ತಿದ್ದು, ಇದರಿಂದ ರಾಜ್ಯದಲ್ಲಿ ಬಾಲ್ಯವಿವಾಹದ ಪ್ರಮಾಣ ಕೂಡ ಹೆಚ್ಚಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಈ ಹಿಂದೆ ಇದೇ ಚಂದ್ರಬಾಬು ನಾಯ್ಡು ಅವರು ಪ್ರಥಮ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಕುಟುಂಬ ನಿಯಂತ್ರಣ ಯೋಜನೆಗೆ ರಾಜ್ಯದಲ್ಲಿ ಸಾಕಷ್ಟು ಒತ್ತು ನೀಡಿದ್ದರು. ಇದೀಗ ಇದೇ ಚಂದ್ರಬಾಬು ನಾಯ್ಡು ಅವರು ರಾಜ್ಯದಲ್ಲಿ ಯುವ ಜನಾಂಗದ ಪ್ರಮಾಣ ಹೆಚ್ಚಾಗಲೆಂದು ಹೆಚ್ಚೆಚ್ಚು ಮಕ್ಕಳನ್ನು ಹೆರುವಂತೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com