
ನವದೆಹಲಿ: ಕಳೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟು ಗಳಿಸಿ ಮೊದಲ ಸ್ಥಾನ ಗಳಿಸಿದ್ದ ಬಿಜೆಪಿಗೆ ಈ ಬಾರಿಯ ಚುನಾವಣಾ ಸಮೀಕ್ಷೆಗಳು ಪ್ರಕಾರ ಇಳಿಮುಖದತ್ತ ಸಾಗಿದೆ.
ಆಮ್ ಆದ್ಮಿ ಪಕ್ಷದ ವಿರುದ್ಧ ಸೆಣೆಸಾಡಲು ಕಿರಣ್ ಬೇಡಿಯನ್ನು ಭಾರತೀಯ ಜನತಾ ಪಕ್ಷದ ಸಿಎಂ ಅಭ್ಯರ್ಥಿ ಎಂದು ಘೋಷಿಸಿತ್ತು. ಇದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ಪಕ್ಷ ಭಾವಿಸಿತ್ತು. ಆದರೆ ಸಿಎಂ ಅಭ್ಯರ್ಥಿ ಘೋಷಣೆ ಬಳಿಕ ಪಕ್ಷದ ಜನಪ್ರಿಯತೆ ಕುಗ್ಗಿದಂತಿದೆ.
ಎಬಿಪಿ-ನೀಲ್ಸನ್ ನಡೆಸಿರುವ ಸಮೀಕ್ಷೆ ಪ್ರಕಾರ ದೇಶದ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ವೃದ್ಧಿಸಿದೆ. ಎಎಪಿ ಪಡೆಯುವ ಮತ ಪ್ರಮಾಣ ಶೇ.4ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ, ಬಿಜೆಪಿಯ ಅಲೆ ಕಡಿಮೆಯಾಗುತ್ತಿದ್ದು ಅದರ ಮತಪ್ರಮಾಣ ಶೇ. 4ರಷ್ಟು ಕುಗ್ಗಿದೆಯಂತೆ.
ಸಮೀಕ್ಷೆ ಪ್ರಕಾರ ಈಗಲೇ ಚುನಾವಣೆ ನಡೆದರೆ ಆಮ್ ಆದ್ಮಿ ಪಕ್ಷಕ್ಕೆ ಬೀಳುವ ಮತ ಪ್ರಮಾಣ ಶೇ.50ರಷ್ಟಿರುತ್ತದೆ. ಬಿಜೆಪಿ ಪಡೆಯುವ ಮತಗಳು ಶೇ. 41 ಎನ್ನಲಾಗಿದೆ. ಎಬಿಪಿ ನ್ಯೂಸ್ ಮತ್ತು ನೀಲ್ಸನ್ ಜಂಟಿಯಾಗಿ ಈ ಸಮೀಕ್ಷೆ ನಡೆಸಿವೆ. ದೆಹಲಿಯ ಎಲ್ಲಾ 70 ಕ್ಷೇತ್ರಗಳನ್ನೂ ಬಳಸಿಕೊಳ್ಳಲಾಗಿದ್ದು, 2,262 ಮತದಾರರನ್ನ ಸಮೀಕ್ಷೆಗೆ ಒಳಪಡಿಸಲಾಗಿದೆ. ಜನವರಿ 24 ಮತ್ತು 25ರಂದು ಎರಡು ದಿನಗಳ ಕಾಲ ಈ ಸಮೀಕ್ಷೆ ನಡೆಸಲಾಗಿದೆ.
ಎರಡು ವಾರಗಳ ಹಿಂದೆಯೂ ಸಮೀಕ್ಷೆ ನಡೆಸಲಾಗಿತ್ತು. ಆಗ, ಎಎಪಿ ಶೇ. 46, ಬಿಜೆಪಿ ಶೇ. 45 ಮತಗಳನ್ನ ಪಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು.
ಫೆಬ್ರುವರಿ 7ರಂದು ದೆಹಲಿಯ ಎಲ್ಲಾ 70 ಕ್ಷೇತ್ರಗಳಿಗೂ ಏಕಕಾಲದಲ್ಲಿ ಮತದಾನ ನಡೆಯಲಿದೆ. ಫೆ.10ರಂದು ಮತಎಣಿಕೆ ನಡೆಯಲಿದೆ.
Advertisement