

ನವದೆಹಲಿ: ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐಗೊಪ್ಪಿಸುವಂತೆ ಮಧ್ಯಪ್ರದೇಶ ಸರ್ಕಾರವು ಹೈಕೋರ್ಟ್‍ಗೆ ಮನವಿ ಮಾಡಿದ್ದರೂ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಗ್ಯುದ್ಧ ಮಾತ್ರ ಮುಂದುವರಿದಿದೆ. ಸರ್ಕಾರದ ನಿರ್ಧಾರವನ್ನು ಖಂಡಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಹಗರಣದ ತನಿಖೆಯು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಸಿಬಿಐಯಿಂದಲೇ ನಡೆಯಬೇಕು ಎಂದು ಒತ್ತಾಯಿಸಿದೆ. ಇದರಿಂದ ಆಕ್ರೋಶಗೊಂಡಿರುವ ಬಿಜೆಪಿ, ``ಕಾಂಗ್ರೆಸ್ ಸಾವಿನ ರಾಜಕೀಯ ಮಾಡುತ್ತಿದೆ'' ಎಂದು ಆರೋಪಿಸಿದೆ.
ಸತ್ಯ ಮರೆಮಾಚುವ ಯತ್ನ: ಕಾಂಗ್ರೆಸ್ ``ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಸಿಬಿಐ ತನಿಖೆಯಿಂದಷ್ಟೇ ಸತ್ಯ ಹೊರಬರಲು ಸಾಧ್ಯ. ಸಿಎಂ ಚೌಹಾಣ್ ಅವರ ಸಿಬಿಐ ತನಿಖೆಯ ನಿರ್ಧಾರವು ಸತ್ಯವನ್ನು ಮರೆಮಾಚುವ ಮತ್ತೊಂದು ಯತ್ನವಷ್ಟೆ. ಇದನ್ನು ನಾವು ಖಂಡಿತಾ ಒಪ್ಪುವುದಿಲ್ಲ'' ಎಂದು ಕಾಂಗ್ರೆಸ್ ಸಂವಹನ ಇಲಾಖೆ ಮುಖ್ಯಸ್ಥ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. 2ಜಿ ಹಗರಣದ ತನಿಖೆಯ ಮೇಲ್ವಿಚಾರಣೆ ನಡೆಸಿದಂತೆಯೇ ಸುಪ್ರೀಂ ಕೋರ್ಟ್ ಈ ಪ್ರಕರಣದ ಮೇಲ್ವಿಚಾರಣೆಯನ್ನೂ ನಡೆಸಬೇಕೆಂದು ಕೋರುತ್ತೇನೆ ಎಂದೂ ಹೇಳಿದ್ದಾರೆ ಸುರ್ಜೇವಾಲಾ.
ಕಾಂಗ್ರೆಸ್‍ನ ಬಣ್ಣ ಬಯಲಾಗಲಿದೆ: ಬಿಜೆಪಿ
ಸಿಎಂ ಚೌಹಾಣ್ ನಿರ್ಧಾರವನ್ನು ಸಮರ್ಥಿಸಿಕೊಂಡಿ ರುವ ಬಿಜೆಪಿ, ``ಕಾಂಗ್ರೆಸ್ ಸಾವಿನ ರಾಜಕೀಯ ಮಾಡುತ್ತಿದೆ. ಯಾವ ತನಿಖೆ ಆಗಬೇಕು ಎಂಬುದನ್ನು ನಿರ್ಧರಿಸಬೇಕಾದ್ದು ನ್ಯಾಯಾಲಯ. ಪ್ರಕರಣದ ಸೂಕ್ತ ತನಿಖೆಯಾದರೆ ಕಾಂಗ್ರೆಸ್‍ನ ನಿಜ ಬಣ್ಣ ಬಯಲಾಗಲಿದೆ'' ಎಂದಿದೆ. ``ಕಾಂಗ್ರೆಸ್ ಪ್ರಾಮಾಣಿಕ ವಾಗಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಸಾರ್ವಜನಿಕವಾಗಿ ಬೊಬ್ಬಿಡುತ್ತಿದೆ ಅಷ್ಟೆ'' ಎಂದು ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ. ಇದೇ ವೇಳೆ, ವ್ಯಾಪಂ ಹಗರಣದಲ್ಲಿ ಬಂಧಿತನಾಗಿರುವ ಲಖನೌನ ಕಿಂಗ್ ಜಾರ್ಜ್ ವೈದ್ಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ವೀರೇಂದ್ರ ಕುಮಾರ್ ಬಿಂದ್‍ನನ್ನು ಕೋರ್ಟ್ 15 ದಿನಗಳ ನ್ಯಾಯಾಂಗ ವಶಕ್ಕೊಪ್ಪಿಸಿ ಆದೇಶ ಹೊರಡಿಸಿದೆ.
ವ್ಯಾಪಂ ತನಿಖೆ ವಿಚಾರದಲ್ಲಿ ಯಾರೂ ಅನುಮಾನಪಡುವ ಅಗತ್ಯವೇ ಇಲ್ಲ. ಮಧ್ಯಪ್ರದೇಶ ಸರ್ಕಾರ ಪಾರದರ್ಶಕವಾಗಿ ತನಿಖೆ ನಡೆಯುವಂತೆ ನೋಡಿಕೊಳ್ಳುತ್ತಿದೆ. ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಅಲ್ಲಿ ಸಾವು ಸಂಭವಿಸುತ್ತಿರುವುದು ಬೇಸರದ ಸಂಗತಿ. ಆದರೆ, ಸಾವಿಗೆ ಬೇರೆ ಬೇರೆ ಕಾರಣದಿಂದ ವಿಶ್ಲೇಷಿಸುವ ಬದಲು ಎಲ್ಲವನ್ನೂ ಹಗರಣದೊಂದಿಗೆ ಕಾಂಗ್ರೆಸ್ ನವರು ತಳುಕು ಹಾಕುತ್ತಿದ್ದಾರೆ. ಹೈಕೋರ್ಟ್ ಮಾ ರ್ಗದರ್ಶನದಡಿ ತನಿಖೆ ನಡೆಯುತ್ತಿರುವಾಗ ಸರ್ಕಾರ ಕೂಡ ಸಿಬಿಐಗೆ ವಹಿಸಲು ಬರುವುದಿಲ್ಲ.
- ನರೇಂದ್ರ ಸಿಂಗ್ ತೋಮರ್,
ಕೇಂದ್ರ ಉಕ್ಕು ಖಾತೆ ಸಚಿವ (ಬೆಂಗಳೂರಿನಲ್ಲಿ)