
ಇಸ್ಲಾಮಾಬಾದ್: ಒಂದು ಕಡೆ ಸ್ನೇಹ ಹಸ್ತಚಾಚಿ, ಮತ್ತೊಂದು ಕಡೆ ದ್ವೇಷದ ಬಗ್ಗೆ ಮಾತನಾಡುವ ಪ್ರವರವನ್ನು ಪಾಕಿಸ್ತಾನ ಮುಂದುವರಿಸಿದೆ. ಭಾರತ ಪಾಕ್ ಪ್ರಧಾನಿಗಳು ಶುಕ್ರವಾರವಷ್ಟೇ ಶಾಂಘೈ ಸಹಕಾರ ಒಕ್ಕೂಟದ ಸಭೆಯಲ್ಲಿ ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಪರಸ್ಪರ ಸ್ನೇಹಪೂರ್ವಕ ಚರ್ಚೆ ನಡೆಸಿದ್ದರೆ, ಇತ್ತ ಪಾಕಿಸ್ತಾನದ ಅರ್ಥ ಸಚಿವ ಇಷಾಕ್ ದರ್ ಮಾತ್ರ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
`ಭಾರತದ ಸೇನೆಯಿಂದ ಆಕ್ರಮಣ ಎದುರಾದರೆ, ಅದಕ್ಕೆ ಪಾಕಿಸ್ತಾನ ತಕ್ಕ ಉತ್ತರ ಕೊಡುತ್ತದೆ' ಎಂದು ಮಾತನಾಡಿದ್ದಾರೆ. `ಪಾಕಿಸ್ತಾನದ ಆರ್ಥಿಕ ಪ್ರಗತಿಯ ಮೇಲೆ `ನವದೆಹಲಿ' ಕೆಂಗಣ್ಣು ಬೀರುವಂತಿಲ್ಲ. ಪಾಕ್ಚೀನಾ ನಡುವೆ ಏರ್ಪಟ್ಟಿರುವ ಆರ್ಥಿಕ ಬಾಂಧವ್ಯ ಭಾರತಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಚೀನಾದೊಂದಿಗೆ ಆರ್ಥಿಕ ವ್ಯವಹಾರಕ್ಕೆ ಮುಂದಾದ ಭಾರತ ಪ್ರಧಾನಿ ಮೋದಿಗೆ ಆ ದೇಶ ಕೆಂಪು ನಿಶಾನೆ ತೋರಿದೆ. ಇದನ್ನು ಸಹಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಅಲ್ಲದೆ, ` ನಾವು ಕಣ್ಣು ಮುಚ್ಚಿ ಕುಳಿತಿಲ್ಲ. ನಾವು ಭಾರತದ ಎದುರು ಕೈಕಟ್ಟಿ ಕುಳಿತುಕೊಳ್ಳಲು ಭಿಕ್ಷುಕರೂ ಅಲ್ಲ ' ಎಂದೂ ಹೇಳಿದ್ದಾರೆ.
ಡಾನ್ನಲ್ಲಿ ಮೋದಿ ಹೊಗಳಿಕೆ
ಭಾರತ ಮತ್ತು ಪಾಕ್ ನಡುವಿನ ಬಾಂಧವ್ಯ ಸುಧಾರಣೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಪಾಕಿಸ್ತಾನದ ಪ್ರಮುಖ ಪತ್ರಿಕೆಯೊಂದು ಹೊಗಳಿದೆ. ``ಪ್ರಧಾನಿ ನರೇಂದ್ರ ಮೋದಿ ಪಾಕ್ನೊಂದಿಗಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಉತ್ಸುಕರಾಗಿದ್ದಾರೆ. ಪಾಕ್ ಪ್ರಧಾನಿ ನವಾಜ್ ಷರೀಫ್ ರೊಂದಿಗಿನ ಅವರ ಭೇಟಿಯಲ್ಲಿ ಉಭಯ ದೇಶಗಳನ್ನು ಹತ್ತಿರವಾಗಿಸುವ ಹಲವು ಮಾತುಕತೆಗಳು ನಡೆದಿವೆ'' ಎಂದು ಹೇಳಿದೆ.
ರಷ್ಯಾದಲ್ಲಿ ನಡೆದ ಎಸ್ಸಿಒ ಶೃಂಗಸಭೆಯಲ್ಲಿ ಶುಕ್ರವಾರ ನವಾಜ್ ಷರೀಫ್ ಮತ್ತು ಮೋದಿ ಭೇಟಿಯಾಗಿರುವ ಬಗ್ಗೆ ಪಾಕ್ನ `ಡಾನ್' ಪತ್ರಿಕೆ ಸಂಪಾದಕೀಯ ಬರೆದಿದ್ದು, ಅದರಲ್ಲಿ ಪಾಕ್ ನೊಂದಿಗಿನ ಸ್ನೇಹಕ್ಕೆ ಮೋದಿ ಆಸಕ್ತರಿದ್ದಾರೆಂದು ಬರೆದಿರುವುದಲ್ಲದೆ, ಮುಂಬರುವ ಸಾರ್ಕ್ ಸಭೆಯಲ್ಲಿ ಭಾಗವಹಿಸಲು ಒಪ್ಪಿರುವ ಮೋದಿ ನಡೆಯನ್ನು ಹಾಡಿಹೊಗಳಿದೆ.
Advertisement