

ಚೆನ್ನೈ: ಮುಖ್ಯಮಂತ್ರಿ ಜಯಲಲಿತಾ ತೀವ್ರ ಅಸ್ವಸ್ಥಗೊಂಡಿದ್ದಾರೆ ಎಂಬ ವದಂತಿ ತಮಿಳುನಾಡಿನಾದ್ಯಂತ ಹಬ್ಬಿದೆ. ಕಳೆದ ಕೆಲವು ದಿನಗಳಿಂದ ಅವರು ಯಾವುದೇ ಸಚಿವಾಲಯದ ಸಭೆ, ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಜಯಲಲಿತಾಗೆ ತೀವ್ರ ಅನಾರೋಗ್ಯ ಕಾಡುತ್ತಿದೆ ಎಂಬ ವದಂತಿ ಎಲ್ಲೆಡೆ ಹರಡುತ್ತಿದೆ.
ತೀವ್ರ ಅಸ್ವಸ್ಥರಾಗಿರುವ ಜಯಲಲಿತಾಗೆ ಮೂತ್ರ ಪಿಂಡ ಅಥವಾ ಯಕೃತ್ತಿನ(ಲಿವರ್) ಟ್ರಾನ್ಸ್ ಪ್ಲಾಂಟ್ ನಡೆಸಬೇಕೆಂತೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಯಾರ ಬಳಿಯೂ ನಿಖರವಾದ ಮಾಹಿತಿಯಿಲ್ಲ.
ರಾಧಾಕೃಷ್ಣ ನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ನಂತರ ಜುಲೈ 4ರಂದು ಶಾಸಾಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಜಯಲಲಿತಾ ಮತ್ತೆಲ್ಲಿಯೂ ಕಾಣಿಸಿಕೊಂಡಿಲ್ಲ.ಎಐಎಡಿಎಂಕೆ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲೂ ಜಯಲಲಿತಾ ಭಾಗವಹಿಸಿರಲಿಲ್ಲ.
ಜಯಲಲಿತಾ ರಾಜ್ಯದ ಮುಖ್ಯಮಂತ್ರಿ. ಅವರ ಆರೋಗ್ಯ ಕ್ಷೇಮ ಸಮಾಚಾರ ತಿಳಿದುಕೊಳ್ಳಲು ತಮಿಳುನಾಡಿನ ಪ್ರತಿಯೊಬ್ಬ ನಾಗರಿಕನು ಕಾತುರರಿಂದ ಕಾಯುತ್ತಿದ್ದಾನೆ. ಹೀಗಾಗಿ ಸರ್ಕಾರ ಜಯಲಲಿತಾ ಆರೋಗ್ಯ ಸಂಬಂಧ ಮಾಹಿತಿ ಬಿಡುಗಡೆ ಮಾಡಬೇಕೆಂದು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಹಾಗೂ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಳಂಗೋವನ್ ಒತ್ತಾಯಿಸಿದ್ದಾರೆ.