ದೆಹಲಿ: ಇಬ್ಬರು ಮಹಿಳೆಯರಿಂದ ಆಟೋ ಚಾಲಕನ ಮೇಲೆ ಲೈಂಗಿಕ ದೌರ್ಜನ್ಯ!
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಆಟೋ, ಕ್ಯಾಬ್ ಚಾಲಕನಿಂದ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ನಡೆದಿರುವ ವರದಿಗಳನ್ನು ಕೇಳಿದ್ದೀರಿ. ಆದರೆ ಇಲ್ಲೊಂದು ಘಟನೆಯಲ್ಲಿ ಆಟೋ ಡ್ರೈವರ್ ಮೇಲೆಯೇ ಇಬ್ಬರು ಮಹಿಳೆಯರು ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾರೆ!.
ಸಫ್ದರ್ಜಂಗ್ ಎಂಕ್ಲೇವ್ ಗೆ ತೆರಳಲು ಆಟೋ ಹಿಡಿದ ಮಹಿಳೆಯೊಬ್ಬರು, ಆಟೋ ಚಾಲಕನಿಗೆ ತನಗೆ 300 ರೂ ನೀಡಬೇಕೆಂದು, ಮನೆಗೆ ತಲುಪಿದ ನಂತರ ವಾಪಸ್ ನೀಡುವುದಾಗಿಯೂ ಹೇಳಿದ್ದಾಳೆ. ಮನೆ ತಲುಪುತ್ತಿದ್ದಂತೆ ಹಣ ನೀಡುವ ನೆಪದಲ್ಲಿ ಆಟೋ ಚಾಲಕನನ್ನು ಮನೆಯೊಳಗೆ ಬರಲು ಹೇಳಿದ್ದಾಳೆ, ಆಟೋ ಚಾಲಕ ಉಮೇಶ್ ಮನೆಯೊಳಗೆ ಬರುತ್ತಿದ್ದಂತೆಯೇ ಹಣ ನೀಡುವ ಬದಲು ಬಾಗಿಲನ್ನು ಲಾಕ್ ಮಾಡಿದ್ದಾರೆ. ಇದಕ್ಕೂ ಮುನ್ನ ಮನೆಯಲ್ಲಿದ್ದ ಟಾಂಜೇನಿಯಾ ಮೂಲದ ಮಹಿಳೆಯೊಂದಿಗೆ ಸೇರಿ ಆಟೋ ಚಾಲಕನೊಂದಿಗೆ ಬಲವಂತದ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ್ದಾಳೆ.
ಇದಕ್ಕೂ ಮುನ್ನ ಮದ್ಯ ಸೇವಿಸುವಂತೆ ಇಬ್ಬರೂ ಮಹಿಳೆಯರು ಉಮೇಶ್ ಗೆ ಒತ್ತಾಯಿಸಿದ್ದಾರೆ. ನಿರಾಕರಿಸಿದ್ದಕ್ಕೆ ಆತನ ಬಟ್ಟೆ ಹರಿದು, ಅತ್ಯಾಚಾರ ನಡೆಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ ಎಂದು ಉಮೇಶ್ ಆರೋಪಿಸಿದ್ದಾರೆ.
ಈ ಘಟನೆಯಿಂದ ಕಂಗಾಲಾದ ಆಟೋ ಚಾಲಕ ಮೊದಲ ಮಹಡಿಯಲ್ಲಿದ್ದ ಮನೆಯಿಂದ ಜಿಗಿದು, ಮಹಿಳೆಯರಿಂದ ಪಾರಾಗಿದ್ದಾನೆ. ಈ ವೇಳೆ ಆತನ ಎರಡೂ ಕಾಲುಗಳು ಮುರಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆಟೋ ಚಾಲಕನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಮಹಿಳೆ ಲಾಲ್ವಾನಿಯನ್ನು ಬಂಧಿಸಿದ್ದಾರೆ ಮತ್ತೋರ್ವ ಮಹಿಳೆಯಾ ಬಂಧನಕ್ಕಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ