2020ರ ಹೊತ್ತಿಗೆ ಭಾರತ ಹಿಂದೂ ದೇಶ: ಅಶೋಕ್ ಸಿಂಘಾಲ್

ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಫಾಲ್, 2020ರ ವೇಳೆಗೆ ಭಾರತ ಹಿಂದೂ ದೇಶವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ...
ವಿಎಚ್ ಪಿ ಮುಖಂಡ ಅಶೋಕ್ ಸಿಂಘಾಲ್ ಕಾರ್ಯಕ್ರಮದಲ್ಲಿ
ವಿಎಚ್ ಪಿ ಮುಖಂಡ ಅಶೋಕ್ ಸಿಂಘಾಲ್ ಕಾರ್ಯಕ್ರಮದಲ್ಲಿ

ನವದೆಹಲಿ: 2014ರ ಚುನಾವಣೆಯಲ್ಲಿ ಕೇಂದ್ರದಲ್ಲಿ ಎನ್ ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿರುವುದು ದೇಶದಲ್ಲಿ ಕ್ರಾಂತಿಯನ್ನು ಹುಟ್ಟುಹಾಕಿದೆ ಎಂದು ಹೇಳಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಫಾಲ್, 2020ರ ವೇಳೆಗೆ ಭಾರತ ಹಿಂದೂ ದೇಶವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನು ಸಾಯಿಬಾಬಾ ಆಶ್ರಮದಲ್ಲಿದ್ದಾಗ ಸಾಯಿಬಾಬಾ ಅವರು, 2020ರ ಹೊತ್ತಿಗೆ ಇಡೀ ದೇಶ ಹಿಂದೂ ದೇಶವಾಗುತ್ತದೆ ಎಂದು ಹೇಳಿದ್ದರು. ಅದರ ಕ್ರಾಂತಿ ಈಗ ಆರಂಭವಾಗಿದೆ ಎಂದು ನನಗನ್ನಿಸುತ್ತದೆ ಎಂದು ಹೇಳಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ 800 ವರ್ಷಗಳ ಗುಲಾಮಗಿರಿಗೆ ಕೊನೆಹಾಡಿದಂತಾಗಿದೆ. ಇದು ಸಾಧಾರಣ ಕ್ರಾಂತಿ ಅಲ್ಲ. ಮತ್ತು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ; ವಿಶ್ವದ ಮುಂದೆ ಹೊಸ ಸಿದ್ಧಾಂತ ಪ್ರಸ್ತುತಪಡಿಸಲಿದೆ ಎಂದು ಅವರು ಹೇಳಿದರು.

ಆರ್ ಎಸ್ ಎಸ್ ನ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಅವರ ಜೀವನ ಮತ್ತು ಕಾರ್ಯಗಳ ಕುರಿತು ಬರೆಯಲಾದ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ವೇಳೆ ಮಾತನಾಡಿದ ಸಚಿವೆ ಸುಷ್ಮಾ ಸ್ವರಾಜ್, ಸುದರ್ಶನ್ ಅವರು ತಮ್ಮ ಸುತ್ತ ಧನಾತ್ಮಕ ಚಿಂತನೆ ರೂಪಿಸಿಕೊಂಡಿದ್ದರು. ಅವರ ಒಳ್ಳೆಯತನ ಅವರನ್ನು ಸಂತರನ್ನಾಗಿ ಮಾಡಿತ್ತು. ಅವರೊಂದಿಗೆ ಇತರರು ಮತ್ತು ಅವರ ಶಿಷ್ಯರು ನಿರ್ಭೀತಿಯಿಂದ ಮಾತನಾಡುವ ವಾತಾವರಣ ನಿರ್ಮಿಸಿದ್ದರು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com