ರಂಜಾನ್ ಸಿಹಿ ಕಳುಹಿಸಿದ ಭಾರತ: ಪಾಕ್ ನಿಂದ ತಿರಸ್ಕಾರ
ಚಂಡೀಗಢ: ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘಟನೆಯಾಗುತ್ತಿದ್ದರೂ ರಂಜಾನ್ ಪ್ರಯುಕ್ತ ಪಾಕಿಸ್ತಾನದ ಅಧಿಕಾರಿಗಳಿಗೆ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಧಿಕಾರಿಗಳು ಸಿಹಿ ಕಳುಹಿಸಿದ್ದು, ಸಿಹಿ ಸ್ವೀಕರಿಸಲು ಪಾಕಿಸ್ತಾನದ ಅಧಿಕಾರಿಗಳು ನಿರಾಕರಿಸಿದ್ದಾರೆಂದು ವರದಿಗಳು ಶನಿವಾರ ಹೇಳಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಭಾರತೀಯ ಗಡಿ ಭದ್ರತಾ ಪಡೆಯ ಅಧಿಕಾರಿಗಳು, ಎರಡು ದೇಶಗಳ ಮಧ್ಯೆ ಯಾವುದೇ ರೀತಿಯ ಸಿಹಿ ಹಂಚಿಕೆ ನಡೆದಿಲ್ಲ. ಸಿಹಿ ಹಂಚಿಕೆ ವಿಚಾರವನ್ನು ಅಧಿಕಾರಿಗಳು ಸಭೆಯಲ್ಲಿ ನಿರ್ಧರಿಸುತ್ತಾರೆ. ಆದರೆ, ಸಭೆ ವೇಳೆ ಈ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಹಾಗಾಗಿ ಈ ವಿಚಾರವನ್ನು ಅಲ್ಲಿಯೇ ಕೈಬಿಡಲಾಯಿತು ಎಂದು ಹೇಳಿದ್ದಾರೆ.
ಹಬ್ಬ, ಸಂತಸ ಕಾರ್ಯಕ್ರಮಗಳಲ್ಲಿ ಎರಡು ದೇಶಗಳು ಸಿಹಿ ಹಂಚಿಕೊಳ್ಳುವುದು ಸಂಪ್ರದಾಯವಾಗಿದ್ದು, ಭಾರತ ಹಾಗೂ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಈ ಸಂಪ್ರದಾಯವನ್ನು ಕೆಲವು ವರ್ಷಗಳಿಂದ ಮುರಿಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇತ್ತ ದೇಶದಾದ್ಯಂತ ರಂಜಾನ್ ಹಬ್ಬ ಆಚರಣೆಯಲ್ಲಿ ತೊಡಗಿದ್ದರೆ, ಅತ್ತ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘನೆ ಮಾಡುತ್ತಲೇಯಿದ್ದು, ಇಂದು ಬೆಳಿಗ್ಗೆಯಿಂದಲೂ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ 9.25ರ ಸುಮಾರಿಗೆ ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಗುಂಡಿನ ದಾಳಿಗೆ ಭಾರತೀಯ ಸೈನಿಕರು ದಿಟ್ಟ ಉತ್ತರ ನೀಡುತ್ತಿದ್ದಾರೆ. ದಾಳಿಯಲ್ಲಿ ಯಾವುದೇ ಪ್ರಾಣಪಾಯವಾಗಲಿ, ಗಾಯಗಳಾಗಿರುವಂತೆ ವರದಿಯಾಗಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ