ಅರೇಬಿಕ್ ಶಿಕ್ಷಣಕ್ಕಾಗಿ ಇಸ್ಲಾಂ ಗೆ ಮತಾಂತರಗೊಂಡ ಇಂಜಿನಿಯರಿಂಗ್ ಪದವೀಧರೆ!

ತಮಿಳುನಾಡಿನ ಏರೊನಾಟಿಕಲ್ ಇಂಜಿನಿಯರಿಂಗ್ ಪದವಿಧರೆಯೊಬ್ಬಳು ಹಿಂದೂ ಧರ್ಮವನ್ನು ಬಿಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಅರೇಬಿಕ್  ಶಿಕ್ಷಣಕ್ಕಾಗಿ ಇಸ್ಲಾಂ ಗೆ ಮತಾಂತರಗೊಂಡ ಇಂಜಿನಿಯರಿಂಗ್ ಪದವೀಧರೆ!

ವಿಲ್ಲುಪುರಂ: ತಮಿಳುನಾಡಿನ ಏರೊನಾಟಿಕಲ್ ಇಂಜಿನಿಯರಿಂಗ್ ಪದವಿಧರೆಯೊಬ್ಬಳು  ಹಿಂದೂ ಧರ್ಮವನ್ನು ಬಿಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.  ಉಲುಂದುರ್ ಪೇಟೆಯ ಪಚಿಯಪ್ಪ ನಗರದ ಪ್ರೇಮಲತಾ ಎಂಬ ಮಹಿಳೆ ಮನೆ ಬಿಟ್ಟು ಹೋಗಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.             

ಕಳೆದ ಕೆಲವು ವರ್ಷಗಳ ಹಿಂದೆ ಪೋಷಕರನ್ನು ಕಳೆದುಕೊಂಡಿದ್ದ ಪ್ರೇಮಲತಾ, ಅಜ್ಜಿ ಕಸ್ತೂರಿಯ ಮನೆಯಲ್ಲಿದ್ದುಕೊಂಡು ಪದವಿ ಶಿಕ್ಷಣ ಪೂರ್ಣಗೊಳಿಸಿದ್ದರು, ಇದಾದ ಬಳಿಕ ಮೂರು ತಿಂಗಳ ತರಬೇತಿಗೆಂದು ತೆರಳಿದ್ದ ಆಕೆ ಕಳೆದ ವಾರ ಮನೆಗೆ ಬಂದಿದ್ದರು. ಆದರೆ ಮನೆಗೆ ಬಂದ ಕೆಲವೇ ದಿನಗಳಲ್ಲಿ  ಪ್ರೇಮಲತಾ ಇದ್ದಕ್ಕಿದ್ದಂತೆಯೇ ಕಾಣೆಯಾಗಿದ್ದು ಕುಟುಂಬ ಸದಸ್ಯರು ಆತಂಕಕ್ಕೊಳಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರೇಮಲತಾ ಕಡಲೂರು ಜಿಲ್ಲೆಯ ಮಂಗಳಂಪೇಟೆ ನಲ್ಲಿರುವ ಅರೇಬಿಕ್ ಕಾಲೇಜಿನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ.

ಪ್ರಕರಣದ ಸಂಬಂಧ ವಿಚಾರಣೆಗೊಳಪಡಿಸಿದಾಗ ತಾನು ಸ್ವಇಚ್ಛೆಯಿಂದ ಮನೆ ಬಿಟ್ಟು ಬಂದಿದ್ದು ಹಲವು ತಿಂಗಳುಗಳ ಹಿಂದೆಯೇ ಇಸ್ಲಾಂ ಗೆ ಮತಾಂತರಗೊಂಡಿರುವುದಾಗಿ ಪ್ರೇಮಲತಾ ತಿಳಿಸಿದ್ದಾರೆ. ಅಲ್ಲದೇ ತನ್ನ ಹೆಸರನ್ನು ಆಯೇಷಾ ದುಲ್ ಅಪ್ರಿಯಾ ಎಂದು ಬದಲಾಯಿಸಿಕೊಂಡಿದ್ದು ಅರೇಬಿಕ್ ಶಿಕ್ಷಣ ಕಲಿಯಲು ಕಾಲೇಜಿಗೆ ಸೇರಿರುವುದಾಗಿ ತಿಳಿಸಿದ್ದಾರೆ.

ತಾನು ಇಸ್ಲಾಂ ಗೆ ಮತಾಂತರವಾಗಿರುವುದಕ್ಕೆ ಕುಟುಂಬದವರ ವಿರೋಧ ವ್ಯಕ್ತವಾಗಬಹುದೆಂಬ ಕಾರಣಕ್ಕೆ ಈ ವಿಷಯವನ್ನು ಆಕೆ ಯಾರಿಗೂ ತಿಳಿಸಿಲ್ಲ. ಅಂತೆಯೇ ಮತಾಂತರಗೊಂಡಿರುವುದಕ್ಕೆ ಕಾರಣವನ್ನು ನೀಡಿಲ್ಲ. ಕುಟುಂಬದವರಿಗೆ ಮಾಹಿತಿ ನೀಡಿದ ಪೊಲೀಸರು ಪೋಷಕರೊಂದಿಗೆ ವಾಪಸ್ ತೆರಳಲು ಸೂಚಿಸಿದರು ಆಕೆ ಮನೆಗೆ ಹೋಗಲು ನಿರಾಕರಿಸಿದ್ದಾಳೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಪ್ರೇಮಲತಾರನ್ನು ಹಾಜರುಪಡಿಸಿದ್ದು, ಅರೇಬಿಕ್ ಶಿಕ್ಷಣ ಮುಂದುವರೆಸಲು ಆಕೆಯನ್ನು ವಾಪಸ್  ಕಾಲೇಜಿಗೆ ಕರೆದುಕೊಂಡು ಹೋಗಲು ನ್ಯಾಯಾಲಯ ಆದೇಶ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com