ಭಯೋತ್ಪಾದನೆಗೆ ಭಾರತ ಕುಮ್ಮಕ್ಕು: ಪಾಕ್ ಕಡತ ತಯಾರಿ

ಪೇಶಾವರ ಶಾಲೆಯ ಮಕ್ಕಳ ಹತ್ಯಾಕಾಂಡದಲ್ಲಿ ಭಾರತದ ಕೈವಾಡವಿತ್ತು ಎಂಬ ಆರೋಪ ಮಾಡುವ ಮೂಲಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:ಪೇಶಾವರ ಶಾಲೆಯ ಮಕ್ಕಳ  ಹತ್ಯಾಕಾಂಡದಲ್ಲಿ ಭಾರತದ ಕೈವಾಡವಿತ್ತು ಎಂಬ ಆರೋಪ ಮಾಡುವ ಮೂಲಕ ಪಾಕಿಸ್ತಾನ ಹೊಸ ಖ್ಯಾತೆ ತೆಗೆದಿದೆ.

ಪಾಕಿಸ್ತಾನಿ ತಾಲಿಬಾನ್ ದಾಳಿಯ ಹೊಣೆ ಹೊತ್ತುಕೊಂಡಿದ್ದರೂ ಮತ್ತು ದಾಳಿ ನಡೆಸಿದ ಭಯೋತ್ಪಾದಕರಲ್ಲಿ ಹಲವರನ್ನು ಬಂಧಿಸಲಾಗಿದ್ದು, ಇನ್ನು ಕೆಲವರನ್ನು ಕೊಂದು ಹಾಕಲಾಗಿದೆ ಎಂದು ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನ ಸೇನೆ ತಿಳಿಸಿದ ನಂತರವೂ ಈ ಆರೋಪ ಮಾಡಿರುವುದು ಎರಡೂ ದೇಶಗಳ ಶಾಂತಿ ಮಾತುಕತೆಗೆ ಹಿನ್ನಡೆಯಾಗಿದೆ.

ಮುಂದಿನ ತಿಂಗಳು ದೆಹಲಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಟ್ಟದ ಮಾತುಕತೆ ನಡೆಯುವುದಕ್ಕೆ ಮುನ್ನ ಪಾಕಿಸ್ತಾನ ಈ ಆರೋಪ ಮಾಡಿದೆ.ಭಾರತ ಬಲೋಚಿಸ್ತಾನ, ಕರಾಚಿಗಳಲ್ಲಿ ಭಯೋತ್ಪಾದನೆಯ ವಿಷದ ಬೀಜ ಬಿತ್ತುತ್ತಿದೆ ಎಂದು ಪಾಕಿಸ್ತಾನ ಕಡತ ತಯಾರಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿವೆ.

ಈ ಕಡತವನ್ನು ಮುಂದಿನ ತಿಂಗಳು ದೆಹಲಿಯಲ್ಲಿ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸುವಾಗ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರು ತರಲಿದ್ದಾರೆ. ತಮ್ಮ ಮಾತುಕತೆ ವೇಳೆ ಪೇಶಾವರ, ಬಲುಚಿಸ್ತಾನ, ಎಫ್ ಎಟಿಎ ಮತ್ತು ಅಫ್ಘಾನಿಸ್ತಾನ ವಿಷಯವನ್ನು ಪ್ರಸ್ತಾಪಿಸುತ್ತಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ.

ಇತ್ತೀಚೆಗೆ ಭಾರತ ಕಳುಹಿಸಿದ್ದು ಎಂದು ಆರೋಪಿಸಿ ಪಾಕಿಸ್ತಾನ ಆಡಳಿತವಿರುವ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಪತ್ತೇದಾರಿ ಡ್ರೋಣ್ ನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಭಾರತ ಅದನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಅಂತಹ ಮಾನವರಹಿತ ವಿಮಾನವನ್ನುಕಳುಹಿಸಿರಲಿಲ್ಲ ಎಂದು ಹೇಳಿತ್ತು. ಡ್ರೋಣ್ ನ್ನು ತಯಾರಿಸುವ ಚೀನಾದ ಸಂಸ್ಥೆ ಕೂಡ, ಮಾನವರಹಿತ ವಿಮಾನಗಳನ್ನು ಯಾವುದೇ ದೇಶಕ್ಕೆ ಮಾರಾಟ ಮಾಡಿಲ್ಲ ಎಂದು ಹೇಳಿತ್ತು.

ಇನ್ನು ಪೇಶಾವರದ ಮಿಲಿಟರಿ ಶಾಲೆಯೊಂದರ ಮೇಲೆ ಕಳೆದ ವರ್ಷ ಡಿಸೆಂಬರ್ 16ರಂದು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ  150 ಮಂದಿಯಲ್ಲಿ 136 ಮಕ್ಕಳಾಗಿದ್ದರು. ಉತ್ತರ ವಜಿರಿಸ್ತಾನ್ ನಲ್ಲಿ ಸೇನಾ ಕಾರ್ಯಚರಣೆಗೆ ಪ್ರತಿಯಾಗಿ ಈ ದಾಳಿ ಎಂದು ತಾಲಿಬಾನ್ ತಿಳಿಸಿತ್ತು.

ಕಳೆದ 10ನೇ ತಾರೀಖಿನಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಷ್ಯಾದ ಉಫಾ ನಗರದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಮಾತುಕತೆ ನಡೆಸಿ ಮುಂಬರುವ ದಿನಗಳಲ್ಲಿ ದ್ವಿಪಕ್ಷೀಯ ಸಂಬಂಧ ಸುಧಾರಣೆ ಕುರಿತು ಆಶಯ ವ್ಯಕ್ತಪಡಿಸಿದ್ದರು.

ಆದರೆ ಪಾಕಿಸ್ತಾನ ಒಂದರ ಮೇಲೊಂದರಂತೆ ಆರೋಪ ಹೊರಿಸುತ್ತಿರುವುದು, ಎರಡೂ ದೇಶಗಳ ಸಂಬಂಧಗಳು ಸದ್ಯಕ್ಕೆ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com