

ನವದೆಹಲಿ: ಅಕ್ರಮ ಗಣಿಗಾರಿಕೆ ನಡೆಸುವವರಿಗೆ ಕಟ್ಟೆಚ್ಚರ ನೀಡಿರುವ ಸುಪ್ರೀಂಕೋರ್ಟ್, "ಸಿ'' ವರ್ಗದ 39 ಗಣಿ ಕಂಪನಿಗಳ ಮರು ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. ಆ ಮೂಲಕ ಅತಿ ಹೆಚ್ಚು ಅಕ್ರಮ ಮಾಡಿರುವ "ಸಿ'' ವರ್ಗದ ಕಂಪನಿಗಳಿಗೆ ಮರು ಗಣಿಗಾರಿಕೆಗೆ ಅವಕಾಶ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಇದರೊಂದಿಗೆ ರಾಜ್ಯದಲ್ಲಿ ಗಣಿಗಾರಿಕೆಗೆ ಚೇತರಿಕೆ ಸಿಗುವ ಸಾಧ್ಯತೆ ಮರೀಚಿಕೆ ಆಗಿದೆ.
ಉನ್ನತಾಧಿಕಾರದ ಸಮಿತಿ (ಸಿಇಸಿ) ನೀಡಿದ ವರದಿ ಆಧರಿಸಿ ಸುಪ್ರೀಂಕೋರ್ಟ್ "ಸಿ'' ವರ್ಗದ ಕಂಪನಿಗಳ ಗಣಿ ಗುತ್ತಿಗೆ ರದ್ದು ಪಡಿಸುವ ತನ್ನ ಆದೇಶವನ್ನು ಬುಧವಾರ ಎತ್ತಿ ಹಿಡಿದಿದೆ. 2013ರಲ್ಲಿ ಆಗ ನ್ಯಾಯಮೂರ್ತಿಗಳಾಗಿದ್ದ ಅಫ್ತಾಬ್ ಆಲಂ "ಸಿ'' ವರ್ಗಕ್ಕೆ ಸೇರಿದ್ದ ಎಲ್ಲ 49 ಗಣಿ ಕಂಪನಿಗಳ ಪರವಾನಿಗೆ ರದ್ದು ಮಾಡಿ ಆದೇಶ ನೀಡಿದ್ದರು. 49 ಗಣಿ ಕಂಪನಿಗಳನ್ನು ಸಿಇಸಿ ಸಿ ವರ್ಗಕ್ಕೆ ಸೇರಿಸಿತ್ತು. ಈ ಪೈಕಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ 39 ಗಣಿ ಕಂಪನಿಗಳ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಗುರುವಾರ ವಿಚಾರಣೆ ಮುಂದುವರಿಯಲಿದ್ದು, ಹರಾಜು ಪ್ರಕ್ರಿಯೆ ಕುರಿತಂತೆ ಮಾಹಿತಿ ನೀಡಲು ಕರ್ನಾಟಕ ಗಣಿ ಇಲಾಖೆಯ ಉನ್ನತಾಧಿಕಾರಿಗಳು ಹಾಜರಾಗುವಂತೆ ಮತ್ತು ಹರಾಜು ಪ್ರಕ್ರಿಯೆ ಕುರಿತಂತೆ ಮಾಹಿತಿ ಒದಗಿಸುವಂತೆಯೂ ನ್ಯಾಯಪೀಠ ನಿರ್ದೇಶನ ನೀಡಿದೆ.
ನ್ಯಾ.ರಂಜನ್ ಗೋಗೊಯ್ ನ್ಯಾಯಪೀಠ ನೀಡಿರುವ ಈ ಆದೇಶವು ಸುಸ್ಥಿರ ಪರಿಸರ ಸಂರಕ್ಷಿಸಿಕೊಳ್ಳುವಲ್ಲಿ ಮೈಲಿಗಲ್ಲು. ನ್ಯಾ.ಆಫ್ತಾಬ್ ಆಲಂ ನೀಡಿದ್ದ ತೀರ್ಪು ಪ್ರಶ್ನಿಸಿ 39 ಕಂಪನಿಗಳು ಸಲ್ಲಿಸಿದ್ದ ಅರ್ಜಿಯಲ್ಲಿ ಸಿಇಸಿ ವಾಸ್ತಾವಾಂಶ ಪರಿಶೀಲಿಸಿಲ್ಲ ಎಂಬ ತಕರಾರು ತೆಗೆದಿದ್ದವು.