
ಲಂಡನ್: ಧೈರ್ಯಂ ಸರ್ವತ್ರ ಸಾಧನಂ ಅನ್ನೋ ಮಾತು ಸುಳ್ಳಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ಇಲ್ಲಿ ಸಾಧನೆ ಮಾಡಿರುವ ಸಾಹಸಿ ಯಾರೆಂದು ಕೇಳಿದರೆ ಎಂಥ ಗಟ್ಟಿಗರೂ ಬೆಚ್ಚಬೇಕು, ಮೆಚ್ಚಬೇಕು!
ಹೌದು. 90ವರ್ಷದ ವೃದ್ಧೆ 15 ಸಾವಿರ ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಿ ಜಗತ್ತನ್ನೇ ಮೂಕಳಾಗಿಸಿದ್ದಾರೆ. ಬ್ರಿಟನ್‍ನ ಎಕ್ಸೆಟರ್ ನಗರದ ಸ್ಟೆಲ್ಲಾ ಗಿಲ್ಲಾರ್ಡ್ ಎಂಬಾಕೆಗೆ ಈಗ 90 ವರ್ಷ. ಆದರೆ ಈ ವಯಸ್ಸಲ್ಲಿ ಇದೆಂಥ ಹುಚ್ಚುಸಾಹಸ ಅನ್ನುವಂತಿಲ್ಲ. ಈಕೆ ಸ್ಕೈಡೈವಿಂಗ್ ಮಾಡಲು ನಿರ್ಧರಿಸಿದ್ದರ ಹಿಂದೆ ಸಮಾಜಮುಖಿ ಕಾರಣವಿದೆ. ಈ ವಯಸ್ಸಿನಲ್ಲಿ ಕ್ಯಾನ್ಸರ್ ವಿರುದ್ಧ ಅಭಿಯಾನ ಆರಂಭಿಸಿರುವ ಸ್ಟೆಲ್ಲಾ ಸ್ಕೈಡೈವ್ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲು ತೀರ್ಮಾನಿಸಿದ್ದರು.
ಈ ಸಾಹಸದಿಂದಾಗಿ ರು.1.54ಲಕ್ಷ ಸಂಗ್ರಹಿಸಿದ ಅವರು ವಿಶ್ವ ಕ್ಯಾನ್ಸರ್ ಸಂಶೋಧನೆಗೆ ನೀಡಿದ್ದಾರೆ. 2012ರಲ್ಲಿ ತಮ್ಮ ಮಗಳು ಕ್ಯಾಥಿ ಕ್ಯಾನ್ಸರ್‍ಗೆ ಬಲಿಯಾದ ನಂತರ ಸ್ಟೆಲ್ಲಾ ಈ ರೋಗದ ವಿರುದ್ಧ ಹೋರಾಡುತ್ತಿದ್ದಾರೆ.
"ಜೊತೆಗಿದ್ದ ಗೈಡ್ ಮೇಲೆ ಪೂರ್ತಿ ಭರವಸೆ ಇಟ್ಟಿದ್ದೆ. ಚೂರೂ ಚಿಂತಿಸದೆ ಸಾಹಸಕ್ಕಿಳಿದೆ. ಪ್ಯಾರಾಚೂಟ್ ತೆರೆದುಕೊಳ್ಳುವ ಹೊತ್ತಿನಲ್ಲಿ ಕೊಂಚ ನರ್ವಸ್ ಆಯ್ತು. ಆದರೆ ಆಮೇಲೆ ಅದೊಂದು ಅದ್ಭುತ ಅನುಭವ. ನಾನು ಹಕ್ಕಿಯಾಗಿ ಜಗತ್ತನ್ನು ನೋಡುತ್ತಿರುವಂತೆ ಭಾಸವಾಯ್ತು."
-ಸ್ಟೆಲ್ಲಾ ಗಿಲಾರ್ಡ್, ಸಾಹಸ ಮಾಡಿದ ಅಜ್ಜಿ
Advertisement