

ಕೋಲ್ಕತಾ: ನೆಸ್ಲೆ ಸಂಸ್ಥೆ ಮ್ಯಾಗಿ ನೂಡಲ್ಸ್ ತಿನಿಸಿನಲ್ಲಿ ವಿಷಕಾರಿ ಸೀಸ ಮತ್ತು ಎಂಎಸ್ ಜಿ ಅಂಶ ಕಂಡುಬಂದ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಮ್ಯಾಗಿ ನೂಡಲ್ಸ್ ಅನ್ನು ಪರೀಕ್ಷೆಗೊಳಪಡಿಸಿದ ಬೆನ್ನಲ್ಲೇ ಮಸಾಲೆ ತಿನಿಸುಗಳಾದ ಕುರ್ ಕುರೆ ಮತ್ತು ಲೇಸ್ ಪದಾರ್ಥಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.
ಪಶ್ಚಿಮ ಬಂಗಾಳದ ಗ್ರಾಹಕ ಸಂಪರ್ಕ ಇಲಾಖೆಯ ಮೂಲಗಳ ಪ್ರಕಾರ ಮ್ಯಾಗಿಯಲ್ಲಿ ವಿಷಕಾರಿ ಅಂಶಗಳು ಪತ್ತೆಯಾದ ಬಳಿಕ ಇತರೆ ಪದಾರ್ಥಗಳನ್ನೂ ಆತಂಕದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಲೇಸ್ ಮತ್ತು ಕುರ್ ಕುರೆ ಗಳ ಕೆಲ ಸ್ಯಾಂಪಲ್ ಪ್ಯಾಕೆಟ್ ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಎರಡೂ ಪದಾರ್ಥಗಳನ್ನು ಪೆಪ್ಸಿಕೋ ಸಂಸ್ಥೆ ತಯಾರಿಸುತ್ತಿದ್ದು, ಇದೀಗ ಈ ಸಂಸ್ಥೆಯನ್ನು ವೀಕ್ಷಣೆಯಲ್ಲಿರಿಸಲಾಗಿದೆ.
ಇನ್ನು ಪಶ್ಚಿಮ ಬಂಗಾಳದ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಸಾಧನ್ ಪಾಂಡೆ ಅವರು ಕೇಂದ್ರ ಸಚಿವ ಅರುಣ್ ಜೇಟ್ಲಿ ಮತ್ತು ರಾಮ್ ವಿಲಾಸ್ ಪಾಸ್ವಾನ್ ಭೇಟಿ ಮಾಡಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮ್ಯಾಗಿಯಂತೆಯೇ ಇಲಾಖೆಗೆ ಕುರ್ ಕುರೆ ಮತ್ತು ಲೇಸ್ ಪದಾರ್ಥಗಳ ಬಗ್ಗೆಯೂ ದೂರುಗಳು ಬಂದಿದ್ದು, ಇದೇ ಕಾರಣಕ್ಕಾಗಿ ಈ ಎರಡು ಪದಾರ್ಥಗಳನ್ನು ಪರೀಕ್ಷೆಗೊಳಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯತಿರಿಕ್ತ ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳದ ಆಹಾರ ಮತ್ತು ಸರಬರಾಜು ಇಲಾಖೆ ಸಚಿವ ಜ್ಯೋತಿಪ್ರಿಯೋ ಮುಲ್ಲಿಕ್ ಅವರು, ಪ್ರಸ್ತುತ ವಿವಾದಕ್ಕೀಡಾಗಿರುವ ಯಾವುದೇ ಪದಾರ್ಥವನ್ನು ನಾವು ನಿಷೇಧಿಸಲು ಸಾಧ್ಯವಿಲ್ಲ. ಮಾರ್ಕೆಟಿಂಗ್ ವ್ಯವಹಾರ ಮಾತ್ರ ಇಲಾಖೆಯ ಜವಾಬ್ಗಾರಿಯಾಗಿದ್ದು, ತಯಾರಿಕೆಯಲ್ಲ ಎಂದು ಹೇಳಿದ್ದಾರೆ.