ಮಾಜಿ ಯೋಧರಿಂದ ಉಪವಾಸ ಬೆದರಿಕೆ

ಸಮಾನ ಹುದ್ದೆ ಸಮಾನ ಪಿಂಚಣಿಗೆ ಸಂಬಂಧಿಸಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರ್ರಿಕರ್‍ರೊಂದಿಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ನಿವೃತ್ತ ಯೋಧರು ನಿರಶನದ ಹಾದಿ ಹಿಡಿಯಲು ನಿರ್ಧರಿಸಿದ್ದಾರೆ...
ಮಾಜಿ ಯೋಧರಿಂದ ಉಪವಾಸ ಬೆದರಿಕೆ ( ಸಾಂದರ್ಭಿಕ ಚಿತ್ರ)
ಮಾಜಿ ಯೋಧರಿಂದ ಉಪವಾಸ ಬೆದರಿಕೆ ( ಸಾಂದರ್ಭಿಕ ಚಿತ್ರ)

ನವದೆಹಲಿ: ಸಮಾನ ಹುದ್ದೆ ಸಮಾನ ಪಿಂಚಣಿಗೆ ಸಂಬಂಧಿಸಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರ್ರಿಕರ್‍ರೊಂದಿಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ನಿವೃತ್ತ
ಯೋಧರು ನಿರಶನದ ಹಾದಿ ಹಿಡಿಯಲು ನಿರ್ಧರಿಸಿದ್ದಾರೆ.

ಅದರಂತೆ ಜೂ.15ರಿಂದ ದೇಶದ 50 ನಗರಗಳಲ್ಲಿ ನಿವೃತ್ತ ಯೋಧರು ನಿರಶನ ಕೂರಲಿದ್ದಾರೆ. ಇದೇ ವೇಳೆ, ಸಮಸ್ಯೆ ತಕ್ಷಣವೇ ಇತ್ಯರ್ಥಗೊಳಿಸಿ ಯೋಜನೆ ಜಾರಿಗೊಳಿಸುವ ಸಲುವಾಗಿ
ಮಧ್ಯೆ ಪ್ರವೇಶಿ ಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವುದಾಗಿ ಭಾರತೀಯ ನಿವೃತ್ತ ಸೈನಿಕರ ಚಳುವಳಿ(ಐಇಎಸ್‍ಎಂ) ತಿಳಿಸಿದೆ.

ಹಲವು ಬಗೆ ಪರ-ವಿರೋಧ ವಾದಗಳ ನಡುವೆಯೂ ಎನ್‍ಡಿಎ ಸರ್ಕಾರ ಈ ಯೋಜನೆ ಜಾರಿಗೆ ಒಲವು ತೋರಿಸಿರುವುದು ಹೌದಾದರೂ, ಅನುಷ್ಠಾನಕ್ಕೆ ಕಾಲಮಿತಿ ನಿಗದಿಪಡಿಸಲು ಹಿಂದೇಟು ಹಾಕುತ್ತಿದೆ. ಇದು ಎರಡು ದಶಕಗಳಿಂದ ಸಮಾನ ಹುದ್ದೆಗೆ ಸಮಾನ ಪಿಂಚಣಿ ಯೋಜನೆಗಾಗಿ ಹೋರಾಟ ನಡೆಸುತ್ತಿರುವ ನಿವೃತ್ತ ಯೋಧರಲ್ಲಿ ಅಸಮಾಧಾನ ಮೂಡಿಸಿದೆ.
ಈ ಬಗ್ಗೆ ನಿವೃತ್ತಯೋಧರ ಸಂಘದ ಉಪಾಧ್ಯಕ್ಷ ಜನರಲ್ ಸತ್ ಬೀರ್ ಸಿಂಗ್ ಮಾತನಾಡಿ, ಪರಿಕ್ಕರ್ ರೊಂದಿಗಿನ ಮಾತುಕತೆ ಯಾವ ನಿರ್ಣಯಕ್ಕೂ ಬರದೇ ಮುಗಿದಿದ್ದು, ಪ್ರಧಾನಿಗೆ ಮಧ್ಯ ಪ್ರವೇಶಿಸಲು ಪತ್ರ ಬರೆದಿದ್ದೇವೆ.

 ಕೂಡಲೇ ನಿರ್ಧಾರಕ್ಕೆ ಬರದಿದ್ದಲ್ಲಿ, ಮುಂದಿನ ನಮ್ಮ ಸಭೆಯಲ್ಲಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿ ಜೂ.14ರಿಂದ ಧರಣಿ ನಡೆಸಲಿದ್ದೇವೆ. ಎಂದಿದ್ದಾರೆ. ಒಂದು ಹುದ್ದೆ ಒಂದು ಪಿಂಚಣಿ ಯೋಜನೆಯ ವ್ಯಾಖ್ಯಾನದ ಬಗ್ಗೆ ಕೊಂಚ ಗೊಂದಲವಿರುವುದರಿಂದ ತಡವಾಗುತ್ತಿದೆ ಎಂಬ ಮೋದಿ ಮಾತಿಗೆ ಪ್ರತಿಕ್ರಿಯಿಸಿರುವ ಸಿಂಗ್ ಯಾವ ಗೊಂದಲವೂ ಇಲ್ಲ. ಇದಕ್ಕಿರುವುದು ಒಂದೇ ವ್ಯಾಖ್ಯಾನ. ತಕ್ಷಣವೇ ಜಾರಿಗೊಳಿಸಿ. ಅಷ್ಟೆ ಎಂದು ಖಡಕ್ಕಾಗಿ ನುಡಿದಿದ್ದಾರೆ.

ಪಿಂಚಣಿ ಬಗ್ಗೆ ರಾಹುಲ್ ಪಿಂಚ್:

ಯೋಧರು ಹಾಗೂ ಮಾಜಿ ಸೈನಿಕರುಯಾತನೆಪಡುತ್ತಿದ್ದಾರೆ. ಆದರೆ ಪ್ರಧಾನಿ ಮಾತ್ರ ಯೋಗ ಮಾಡೋದ್ರಲ್ಲಿ ಬ್ಯುಸಿ! ಚುನಾವಣೆಗೆ ಮುಂಚೆ ಹರಿಯಾಣ, ಪಂಜಾಬ್ ಭೇಟಿ ನೀಡಿದ ಮೋದಿ ಹೇಳಿ ದ್ದೇನು? ಅಧಿಕಾರಕ್ಕೆ ಬಂದ ಕೂಡಲೆ ಸಮಾನ ಹುದ್ದೆಗೆ ಸಮಾನ ಪಿಂಚಣಿ ಯೋಜನೆ ಜಾರಿಗೆ ತಂದುಬಿಡುತ್ತೇನೆ ಎಂದಿದ್ದ ಮೋದಿ ಈಗ ಮಾಡುತ್ತಿರುವುದೇನು?'' ಇದು ರಾಹುಲ್ ವಾಗ್ಬಾಣ. ಕೋಲ್ಕತಾದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ``ಯುಪಿಎ ಸರ್ಕಾರಾವಧಿಯಲ್ಲೇ ಈ ಯೋಜನೆಗೆ ಪೂರ್ವಸಿದ್ಧತೆ ಗಳಾಗಿವೆ. ಹಣ ಕೂಡ ನಿಗದಿಮಾಡಲಾಗಿದೆ. ಆದರೆ ಜಾರಿಗೆ ತರಲು ಮೋದಿ ಸರ್ಕಾರ ವಿಫಲವಾಗಿದೆ. ಅಧಿಕಾರಕ್ಕೆ ಬಂದು ಒಂದು ವರ್ಷವಾಯ್ತು. ಸೈನಿಕರು ಅಕ್ಷರಶಃ ಅಳುತ್ತಿದ್ದಾರೆ. ಮೋದಿಗೆ ಇದಕ್ಕಿಂತ ಯೋಗವೇ ಮುಖ್ಯವಾಗಿದೆ'' ಎಂದು ಗುಡುಗಿದರು.

ಜಯ್ ದಿವಸ್‍ದೊಳಗೆ ಘೋಷಿಸಿ: ರಾಜೀವ್ ಚಂದ್ರಶೇಖರ್
ಸಮಾನ ಹುದ್ದೆಗೆ ಸಮಾನ ಪಿಂಚಣಿ ನೀತಿಯನ್ನು ಕೇಂದ್ರ ಸರ್ಕಾರ ಜು.26ರ ಕಾರ್ಗಿಲ್ ವಿಜಯ ದಿವಸದೊಳಗೆ ಘೋಷಣೆ ಮಾಡುವ ವಿಶ್ವಾಸ ಇದೆ ಎಂದು ರಾಜ್ಯಸಭಾ
ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ದೆಹಲಿಯ ಕಾನ್ಸ್‍ಟಿಟ್ಯೂಷನ್ ಕ್ಲಬ್‍ನಲ್ಲಿ ಶನಿವಾರ ನಿವೃತ್ತ ಸೇನಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಪ್ರಾಣ ಒತ್ತೆಯಿಟ್ಟು ದೇಶ ರಕ್ಷಿಸುವ ಸೇನಾನಿಗಳನ್ನು ಗೌರವದಿಂದ ನಡೆಸಿಕೊಳ್ಳುವುದು ಸರ್ಕಾರ ಮತ್ತು ಜನರ ಕರ್ತವ್ಯ. ಬಜೆಟ್‍ನಲ್ಲಿ ಸಮಾನ ಹುದ್ದೆಗೆ ಸಮಾನ ಪಿಂಚಣಿ ನೀತಿ ಜಾರಿಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ಅದರ ಶೀಘ್ರ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜೀವ್ ಚಂದ್ರಶೇಖರ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com