ಮ್ಯಾಗಿ ಆಯ್ತು, ಈಗ ಉಳಿದ ಬ್ರ್ಯಾಂಡ್‍ಗಳಿಗೂ ಅಗ್ನಿಪರೀಕ್ಷೆ

ಮ್ಯಾಗಿ ನೂಡಲ್ಸ್ ಬಳಿಕ ಈಗ ಉಳಿದ ಬ್ರ್ಯಾಂಡ್‍ಗಳ ಮೇಲೂ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್‍ಎಸ್‍ಎಐ)ದ ಕಣ್ಣು ಬಿದ್ದಿದೆ...
ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ
ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ

ನವದೆಹಲಿ: ಮ್ಯಾಗಿ ನೂಡಲ್ಸ್ ಬಳಿಕ ಈಗ ಉಳಿದ ಬ್ರ್ಯಾಂಡ್‍ಗಳ ಮೇಲೂ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್‍ಎಸ್‍ಎಐ)ದ ಕಣ್ಣು ಬಿದ್ದಿದೆ.

ಮ್ಯಾಗಿಗೆ ನಿಷೇಧ ಹೇರಿದ ಬೆನ್ನಲ್ಲೇ ಪಾಸ್ತಾ, ಮ್ಯಾಕ್ರೋನಿ ಸೇರಿದಂತೆ ಇತರೆ ಬ್ರ್ಯಾಂಡ್‍ಗಳ ನೂಡಲ್ಸ್‍ಗಳನ್ನೂ ಪರೀಕ್ಷೆಗೊಳಪಡಿಸಲು ಪ್ರಾ„ಕಾರ ನಿರ್ಧರಿಸಿದೆ. ಆಹಾರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಪ್ರಾಧಿಕಾರ ತಿಳಿಸಿದೆ. ಜತೆಗೆ, ಸದ್ಯಕ್ಕೆ ಉತ್ಪನ್ನಗಳ ರಾಯಭಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದಿದೆ.

ಸೋಮವಾರ ಪಟ್ಟಿ ಪ್ರಕಟ:
ಶನಿವಾರ ಈ ಬಗ್ಗೆ ವಿವರ ನೀಡಿದ ಪ್ರಾಧಿಕಾರದ ಸಿಇಒ ಯಧುವೀರ್ ಸಿಂಗ್ ಮಲಿಕ್, ``ನಾವ್ಯಾಕೆ ಒಂದೇ ಬ್ರ್ಯಾಂಡ್ ಮೇಲೆ ಕ್ರಮ ಕೈಗೊಳ್ಳಬೇಕು? ಎಲ್ಲ ಬ್ರ್ಯಾಂಡ್‍ಗಳ ಮಾದರಿಗಳನ್ನೂ ಪರೀಕ್ಷಿಸುತ್ತೇವೆ. ಪರೀಕ್ಷೆ ಗೊಳಪಡುವ ಬ್ರ್ಯಾಂಡ್‍ಗಳ ಹೆಸರುಗಳನ್ನು ಸೋಮವಾರ ಪ್ರಕಟಿಸುತ್ತೇವೆ. ಅನುಮತಿ ಪಡೆಯದ ಬ್ರ್ಯಾಂಡ್‍ಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ'' ಎಂದಿದ್ದಾರೆ.

ಆದರೆ, ಅವರು ಐಟಿಸಿಯ ಸನ್ ಫೀಸ್ಟ್ ಯಿಪ್ಪಿ, ಎಚ್ ಯುಎಲ್‍ನ ನಾರ್ ಮತ್ತು ನಿಸ್ಸಿನ್ ಫಾಡ್ಸ್‍ನ ಟಾಪ್ ರಾಮೆನ್, ನೇಪಾಳದ ಚೌಧರಿ ಗ್ರೂಪ್‍ನ ವಾಯ್ ವಾಯ್ ಮತ್ತಿತರ ಉತ್ಪನ್ನಗಳ ಬಗ್ಗೆ ಪ್ರಸ್ತಾಪಿಸಿಲ್ಲ. ಈ ನಡುವೆ, ಮಹಾರಾಷ್ಟ್ರ, ರಾಜಸ್ಥಾನ, ತ್ರಿಪುರ ಹಾಗೂ ಪಂಜಾಬ್‍ನಲ್ಲೂ ಶನಿವಾರ ಮ್ಯಾಗಿ ಮಾದರಿಯಲ್ಲಿ ಹೆಚ್ಚುವರಿ ಸೀಸದ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ.

ಏನಿದು ಎಂಎಸ್‍ಜಿ?

ಮ್ಯಾಗಿ ವಿವಾದ ಭುಗಿಲೇಳಲು ಕಾರಣವೇ ಅದರಲ್ಲಿದ್ದ ಮೋನೋಸೋಡಿಯಂ ಗ್ಲುಟಮೇಟ್(ಎಂಎಸ್‍ಜಿ) ಎಂಬ ರಾಸಾಯನಿಕ. ಈ ಎಂಎಸ್‍ಜಿಯನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಹಾಕಿದ್ದೇ ನೆಸ್ಲೆ ಕಂಪನಿ ಮಾಡಿದ ತಪ್ಪು. ಮೋನೋ ಸೋಡಿಯಂ ಗ್ಲುಟಮೇಟ್ ಎನ್ನುವುದು ಗ್ಲುಟಾಮಿಕ್ ಆಮ್ಲದ ಸೋಡಿಯಂ ಸಾಲ್ಟ್. ಆಹಾರ ಪದಾರ್ಥದ ರುಚಿ ಹೆಚ್ಚಿಸಲೆಂದು ಎಂಎಸ್‍ಜಿಯನ್ನು ಸೇರಿಸಲಾಗುತ್ತದೆ. ಇದು ಒಂದು ರೀತಿಯಲ್ಲಿ ನಿಧಾನಗತಿಯ ವಿಷವಿದ್ದಂತೆ. ಇದನ್ನು ಅತಿಯಾಗಿ ಸೇವಿಸಿದರೆ ಹೃದಯ ಸಂಬಂಧಿ ಸಮಸ್ಯೆ, ಬೊಜ್ಜು, ಕಣ್ಣಿನ ಸಮಸ್ಯೆ, ತಲೆನೋವು, ಖಿನ್ನತೆ, ಬಳಲಿಕೆ, ಎದೆನೋವು, ಉಸಿರಾಟದ ಸಮಸ್ಯೆ, ದೌರ್ಬಲ್ಯ ಮತ್ತಿತರ ಅನೇಕ ಆರೋಗ್ಯ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ.

ಶ್ರಮ ನನ್ನದು, ಲಾಭ ಬಾಸ್‍ಗೆ!
ವಿಶ್ವಾದ್ಯಂತ ಮ್ಯಾಗಿ ವಿವಾದ ಕಾವು ಪಡೆದಿದ್ದರೆ, ಮ್ಯಾಗಿಯಲ್ಲಿರುವ ಅಪಾಯಕಾರಿ ಅಂಶವನ್ನು ಪತ್ತೆ ಹಚ್ಚಿದ್ದು ಯಾರು ಎಂಬ ವಿಚಾರದಲ್ಲಿ ಹೊಸ ವಿವಾದ ಶುರುವಾಗಿದೆ. `ವಿಷಕಾರಿ ಅಂಶ ಪತ್ತೆ ಹಚ್ಚಿದ್ದೇ ನಾನು. ಆದರೆ ನನ್ನ ಬಾಸ್ ವಿ.ಕೆ. ಪಾಂಡೆ ಅವರು, ತಾವೇ ವಿವಾದ ಬೆಳಕಿಗೆ ತಂದಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ' ಎಂದು ಉತ್ತರ ಪ್ರದೇಶದ ಆಹಾರ ಸುರಕ್ಷಾ ಅಧಿಕಾರಿ ಸಂಜಯ್ ಸಿಂಗ್ ಆರೋಪಿಸಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ಮತ್ತೊಬ್ಬ ಅಧಿಕಾರಿ ಪಾಂಡೆ, ``ಸ್ಯಾಂಪಲ್ ಅನ್ನು ಸಿಂಗ್ ಅವರು ಪರೀಕ್ಷೆಗೆ ಕಳುಹಿಸಿದ್ದರೂ, ವರದಿ ಬಳಿಕ ಕ್ರಮ ಕೈಗೊಂಡಿದ್ದು ನಾನು'' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com