ಬಂಧಿಸುವುದಕ್ಕೆ ತೋಮರ್ ಭಯೋತ್ಪಾದಕರಾ?: ಮನೀಷ್ ಸಿಸೋಡಿಯಾ
ನವದೆಹಲಿ: ನಕಲಿ ಕಾನೂನು ಪದವಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ದೆಹಲಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ಬಂಧಿಸಿರುವುದಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ತೋಮರ್ ಬಂಧನದ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಬಂಧಿಸಲು ತೋಮರ್ ಭಯೋತ್ಪಾಕರಾ? ಅವರೇನು ದೆಹಲಿಯಲ್ಲಿ ಬಾಂಬ್ ಸ್ಫೊಟಿಸಿದ್ದರಾ ಎಂದು ಪ್ರಶ್ನಿಸಿದ್ದಾರೆ. ತೋಮರ್ ಭಯೋತ್ಪಾದಕರಲ್ಲ ಎಂದರೆ ಅವರನ್ನು ಬಂಧಿಸಲು ಹೆಚ್ಚಿನ ಪೊಲೀಸರನ್ನೇಕೆ ಕಳಿಸಬೇಕಿತ್ತು ಎಂದು ಮನೀಷ್ ಸಿಸೋಡಿಯಾ ಕೇಳಿದ್ದಾರೆ.
ತೋಮರ್ ವ್ಯಾಸಂಗ ಮಾಡಿದ್ದ ಕಾಲೇಜು, ಜಿತೇಂದ್ರ ತೋಮರ್, ನಮ್ಮ ಕಾಲೇಜಿನ ವಿದ್ಯಾರ್ಥಿಯಾಗಿದ್ದರು ಎಂದು ಸ್ಪಷ್ಟವಾಗಿ ತಿಳಿಸಿದೆ. ಅಲ್ಲದೇ ಅವರು ಕಾನೂನು ಪದವಿ ಪಡೆದಿದ್ದಾರೆ ಎಂದೂ ಸ್ಪಷ್ಟಪಡಿಸಿದೆ. ಆದಾಗ್ಯೂ ತೋಮರ್ ಅವರನ್ನು ಬಂಧಿಸಲಾಗಿದ್ದು ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಷಡ್ಯಂತ್ರದಿಂದ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಮನಿಷ್ ವಾಗ್ದಾಳಿ ನಡೆಸಿದ್ದಾರೆ.
ಆಮ್ ಆದ್ಮಿ ಸರ್ಕಾರ ದೆಹಲಿಯಲ್ಲಿ ಭ್ರಷ್ಟಾಚಾರ ಇಲ್ಲದಂತೆ ಮಾಡಿದೆ. ಇದನ್ನು ಸಹಿಸದ ಕೆಲ ಭ್ರಷ್ಟ ನಾಯಕರು ದೆಹಲಿಯಲ್ಲಿ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಆರೋಪಿಸಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆಯೇ ಆಮ್ ಆದ್ಮಿ ಸರ್ಕಾರದ ಸಾಧನೆ, ನಮಗೆ ಸಂಪೂರ್ಣ ಬಹುಮತವಿದ್ದು, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಕ್ಕೆ ಯಾರೇ ಅಡ್ಡಿ ಉಂಟುಮಾಡಿದರೂ ಸಹಿಸುವುದಿಲ್ಲ ಎಂದು ಮನೀಷ್ ಸಿಸೋಡಿಯಾ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ