ಫೇಸ್‌ಬುಕ್‌ನಲ್ಲಿ ಚಿರತೆಯೊಂದಿಗಿನ ಚೆಲ್ಲಾಟ ವಿಡಿಯೋ ಅಪಲೋಡ್ ಮಾಡಿದ್ದ ಯುವಕನ ಬಂಧನ
ಹೈದರಾಬಾದ್: ಮೃಗಾಲಯದ ಸಿಬ್ಬಂದಿಗೆ ಲಂಚ ನೀಡಿ ಚಿರತೆಯೊಂದರ ಜೊತೆ ಚೆಲ್ಲಾಟವಾಡಿದ್ದು, ಅಲ್ಲದೆ ಅದನ್ನು ಚಿತ್ರೀಕರಿಸಿಕೊಂಡು ಆ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಅಪ್ ಲೋಡ್ ಮಾಡಿದ್ದ ಯುವಕನನ್ನ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದಿನ ನೆಹರು ಜುವಾಲಜಿಕಲ್ ಪಾರ್ಕಿಗೆ ತೆರಳಿದ್ದ 26 ವರ್ಷದ ಅರೀಬ್ ಮೆಹದಿ ಎಂಬ ಯುವಕ ಅಲ್ಲಿನ ಮೃಗಾಲಯದ ಸಿಬ್ಬಂದಿಗೆ ಲಂಚ ನೀಡಿ ಚಿರತೆಯೊಂದರ ಜೊತೆ ಆಟವಾಡಿದ್ದಾನೆ. ಅಷ್ಟೇ ಅಲ್ಲದೇ ಇದರ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಹಾಕಿದ್ದ. ಈ ಫೇಸ್‌ಬುಕ್ ಜಾಡು ಹಿಡಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇದು ಮೃಗಾಲಯದ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸರಿಗೆ ದೂರು ನೀಡಿದ್ದು, ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಅರೀಬ್ ಮೆಹದಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿದ್ದಾರೆ. ವಿಚಾರಣೆ ವೇಳೆ ತನಗೆ ಪ್ರಾಣಿಗಳೆಂದರೆ ಬಹು ಇಷ್ಟ. ಅವುಗಳೊಂದಿಗೆ ಸ್ವಲ್ಪ ಸಮಯ ಏಕಾಂತವಾಗಿ ಕಳೆಯಬೇಕೆಂಬ ಕಾರಣಕ್ಕಾಗಿ ಮೃಗಾಲಯಕ್ಕೆ ತೆರಳಿದ್ದಾಗಿ ತಿಳಿಸಿದ್ದಾನೆಂದು ಹೇಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ