
ಅಹಮದಾಬಾದ್: ಬಿಹಾರದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವೊಂದರ ನಿರ್ಮಾಣಕ್ಕಾಗಿ ಮುಸ್ಲಿಮರು ಭೂದಾನ ಮಾಡಿದ್ದ ವಿಷಯ ಇತ್ತೀಚೆಗಷ್ಟೇ ದೊಡ್ಡ ಸುದ್ದಿಯಾಗಿತ್ತು. ಈಗ ಅಂತಹದ್ದೇ ಮತ್ತೊಂದು ಅಪರೂಪದ ಘಟನೆ ನಡೆದಿದ್ದು, ಗುಜರಾತ್ ನಲ್ಲಿ ನಿವೃತ್ತ ಮುಸ್ಲಿಂ ಶಾಲಾ ಶಿಕ್ಷಕರೊಬ್ಬರು ತಮ್ಮ ಉಳಿತಾಯದ ಬಹುಪಾಲು ಹಣವನ್ನು ಸರಸ್ವತಿ ದೇವಾಲಯ ನಿರ್ಮಾಣಕ್ಕೆ ದಾನ ನೀಡಿದ್ದಾರೆ. ಈ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.
ಸರಸ್ವತಿಯನ್ನು ವಿದ್ಯೆಯ ಅಧಿದೇವತೆ ಎಂದೇ ಪರಿಗಣಿಸಲಾಗಿದ್ದು, ನಿವೃತ್ತ ಶಿಕ್ಷಕರಾಗಿರುವ ಅಬ್ದುಲ್ ವೋರಾ(ಅಬ್ದುಲ್ ಚಾಚಾ) ಎಂಬುವವರು ವೃತ್ತಿ ಜೀವನದಲ್ಲಿ ಉಳಿತಾಯ ಮಾಡಿದ್ದ ಬಹುಪಾಲು ಹಣವನ್ನು ಸರಸ್ವತಿ ಮಂದಿರ ನಿರ್ಮಾಣಕ್ಕಾಗಿ ವಿನಿಯೋಗಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮೊದಲು ನಾನೊಬ್ಬ ಶಿಕ್ಷಕ ಉಳಿದಿದ್ದೆಲ್ಲವೂ ಅನಂತರದ್ದು ನನ್ನ ಮಕ್ಕಳೇ(ವಿದ್ಯಾರ್ಥಿಗಳು) ನನಗೆ ಸ್ಪೂರ್ತಿ, ನನ್ನ ಮಕ್ಕಳಿಗೆ ಸರಸ್ವತಿಯೇ ಸ್ಪೂರ್ತಿ ಆದ್ದರಿಂದ ಸರಸ್ವತಿ ದೇವಾಲಯ ನಿರ್ಮಾಣ ಮಾಡಲು ಉಳಿತಾಯದ ಹಣ ನೀಡಿದ್ದೇನೆ ಎಂದು ಹೇಳಿದ್ದಾರೆ.
ಹಿಂದೂಗಳು ಬಹುಸಂಖ್ಯಾತರಾಗಿರುವ ಗುಜರಾತ್ ನ ಮರೀದ ಗ್ರಾಮದಲ್ಲಿ ಅಬ್ದುಲ್ ವೋರಾ ಸುಮಾರು 30 ವರ್ಷಗಳು ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಶಿಕ್ಷಕರಾಗಲು ಖೇಡಾ ಜಿಲ್ಲೆಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಅಲ್ಲಿದ್ದ ಸರಸ್ವತಿ ದೇವಾಲಯದಿಂದ ತಾವು ಪ್ರಭಾವಗೊಂದಿರುವುದಾಗಿ ಅಬ್ದುಲ್ ವೋರಾ ತಿಳಿಸಿದ್ದಾರೆ.
ತಮ್ಮಂತೆಯೇ ಗ್ರಾಮದ ಹಲವರು ದೇವಾಲಯ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದು, ಕಾಮಗಾರಿ ಪ್ರಾರಂಭವಾದ 5 ವರ್ಷದಲ್ಲಿ ದೇವಾಲಯ ನಿರ್ಮಾಣ ಪೂರ್ಣಗೊಂಡಿದೆ ಎಂದು ಅಬ್ದುಲ್ ವೋರಾ ತಿಳಿಸಿದ್ದಾರೆ. ಗ್ರಾಮದಲ್ಲಿರುವ 3 ಮುಸ್ಲಿಂ ಕುಟುಂಬಗಳ ಪೈಕಿ ವೋರಾ ಅವರ ಕುಟುಂಬವೂ ಒಂದಾಗಿದ್ದು, ದೇವಾಲಯ ನಿರ್ಮಾಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದವರ ಪೈಕಿ ವೋರಾ ಕೂಡ ಒಬ್ಬರಾಗಿದ್ದಾರೆ.
Advertisement