ಕರುಣಾನಿಧಿ ಸಿಎಂ ಎಂದು ಮುದ್ರಣ: 3 ಲಕ್ಷ ಪಠ್ಯ ಪುಸ್ತಕಗಳನ್ನು ವಾಪಸ್ ಪಡೆದ ತ.ನಾಡು ಸರ್ಕಾರ

ತಮಿಳುನಾಡು ಶಿಕ್ಷಣ ಇಲಾಖೆ ಮಾಡಿದ ಯಡವಟ್ಟಿನಿಂದಾಗಿ ಸುಮಾರು 3 ಲಕ್ಷ ಪುಸ್ತಕಗಳನ್ನು ತಮಿಳುನಾಡು ಸರ್ಕಾರ ವಾಪಸ್ ಪಡೆದಿದೆ.
ಕರುಣಾನಿಧಿ ಮತ್ತು ಜಯಲಲಿತಾ
ಕರುಣಾನಿಧಿ ಮತ್ತು ಜಯಲಲಿತಾ
Updated on: 

ಚೆನ್ನೈ: ತಮಿಳುನಾಡು ಶಿಕ್ಷಣ ಇಲಾಖೆ ಮಾಡಿದ ಯಡವಟ್ಟಿನಿಂದಾಗಿ ಸುಮಾರು 3 ಲಕ್ಷ ಪುಸ್ತಕಗಳನ್ನು ತಮಿಳುನಾಡು ಸರ್ಕಾರ ವಾಪಸ್ ಪಡೆದಿದೆ.

ಸರ್ಕಾರಿ ಶಾಲೆಗಳಿಗೆ ಸರ್ಕಾರ ಹಂಚಿಕೆ ಮಾಡಿದ್ದ ಪುಸ್ತಕಗಳಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರ ಬದಲಿಗೆ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಎಂದು ಮುದ್ರಣವಾಗಿದ್ದು, ಇದೇ ಕಾರಣಕ್ಕಾಗಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಹಂಚಿಕೆಯಾಗಿದ್ದ ಸುಮಾರು 2.5 ಲಕ್ಷ ಪ್ರಥಮ ಪಿಯುಸಿ ಪಠ್ಯ ಪುಸ್ತಕ ಮತ್ತು 70 ಸಾವಿರ ಇತಿಹಾಸ ಪುಸ್ತಕಗಳನ್ನು ತಮಿಳುನಾಡು ಸರ್ಕಾರ ವಾಪಸ್ ಪಡೆದಿದೆ.

ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದೊಂದು ಕಣ್ತಪ್ಪಿನಿಂದ ಆಗಿರುವ ಘಟನೆಯಾಗಿದೆ ಎಂದು ಹೇಳಿದ್ದಾರೆ. ಆದರೆ ಮೂಲಗಳ ಪ್ರಕಾರ ತಮಿಳುನಾಡು ಸರ್ಕಾರಿ ಶಾಲಾ-ಕಾಲೇಜುಗಳಿಗೆ ಹಂಚಿಕೆಯಾಗುತ್ತಿರುವ ಪಠ್ಯ ಪುಸ್ತಕಗಳು 2011ರಿಂದಲೂ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಕಳೆದ 4 ವರ್ಷಗಳಿಂದಲೂ ಇದೇ ರೀತಿಯ ತಪ್ಪುಗಳು ನಡೆಯುತ್ತಿದ್ದು, ಯಾವೊಬ್ಬ ಅಧಿಕಾರಿ ಕೂಡ ಈ ಬಗ್ಗೆ ಗಮನ ಹರಿಸದೇ ಇರುವುದು ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಿಕ್ಷಣ ತಜ್ಞರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2011ರಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2014ರಲ್ಲಿ ಅಕ್ರಮ ಆಸ್ಥಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪುನೀಡಿದ್ದ ವಿಶೇಷ ನ್ಯಾಯಾಲಯ ಅವರನ್ನು ಅಪರಾಧಿ ಎಂದು ತೀರ್ಪುನೀಡಿ ಐದು ವರ್ಷ ಸೆರೆವಾಸ ಶಿಕ್ಷೆ ನೀಡಿತ್ತು. ಬಳಿಕ ನಡೆದ ರಾಜಕೀಯ ಬೆಳವಣಿಗೆಯಿಂದಾಗಿ ಜಯಲಲಿತಾ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇತ್ತೀಚೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಜಯಲಲಿತಾ ನಿರ್ಧೋಷಿಯಾಗಿ ಹೊರಬಂದು ಮತ್ತೆ ತಮಿಳುನಾಡು ಮುಖ್ಯಮಂತ್ರಿ ಗಾದಿಗೇರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com